
ಕಡಬ (ಉಪ್ಪಿನಂಗಡಿ): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಕಡಬ ತಾಲ್ಲೂಕಿಗೆ ₹ 224 ಕೋಟಿಯ ಪ್ರಯೋಜನವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಕಡಬ ಪಟ್ಟಣ ಪಂಚಾಯಿತಿ ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ಯಾರಂಟಿ ಯೋಜನೆಗೆ ನೋಂದಾಯಿಸದೆ ಇರುವವರ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ಕಡಬ ತಾಲ್ಲೂಕಿನ 21 ಗ್ರಾಮ ಪಂಚಾಯಿತಿ ಹಾಗೂ ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಪ್ರಯೋಜನ ದೊರೆತಿದೆ. ಈ ಪೈಕಿ 60,043 ಗೃಹಜ್ಯೋತಿ ಫಲಾನುಭವಿಗಳಿಗೆ ₹ 32 ಕೋಟಿ, 76,946 ಗೃಹಲಕ್ಷ್ಮಿ ಫಲಾನುಭವಿಗಳಿಗೆ, ಅನ್ನ ಭಾಗ್ಯ ಯೋಜನೆಯ 35,853 ಫಲಾನುಭವಿಗಳಿಗೆ, ಶಕ್ತಿ ಯೋಜನೆಯ 2,60,84,349 ಫಲಾನುಭವಿಗಳಿಗೆ, ಯುವ ನಿಧಿಯ 348 ಮಂದಿ ಫಲಾನುಭವಿಗಳಾಗಿದ್ದಾರೆ. ತಾಲ್ಲೂಕಿನಲ್ಲಿ ಶಿಬಿರಗಳನ್ನು ಮಾಡಿ 700ಕ್ಕೂ ಹೆಚ್ಚು ತಿರಸ್ಕಾರಗೊಂಡ ಅರ್ಜಿಗಳನ್ನು ಸರಿಪಡಿಸಲಾಗಿದೆ ಎಂದರು.
ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್, ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್, ತಾಲ್ಲೂಕು ಪಂಚಾಯಿತಿ ಸಿಇಒ ನವೀನ್ ಭಂಡಾರಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಅನುಷ್ಠಾನ ಸಮಿತಿ ಸದಸ್ಯರಾದ ಗೌರಿ, ಭವಾನಿಶಂಕರ್, ಜಗದೀಶ್, ಗಂಗಾಧರ ಶೆಟ್ಟಿ, ಸತೀಶ್ ಪಿ.ಎನ್., ಹರಿಣಾಕ್ಷಿ ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಸಿಬ್ಬಂದಿ ಹರೀಶ್ ಬೆದ್ರಾಜೆ ಸ್ವಾಗತಿಸಿ, ಕುಟ್ರುಪ್ಪಾಡಿ ಪಿಡಿಒ ಆನಂದ ಗೌಡ ವಂದಿಸಿದರು. ಭರತ್ ರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.