ಪುತ್ತೂರು: ಕರ್ನಾಟಕ–ಕೇರಳ ಗಡಿಪ್ರದೇಶದಲ್ಲಿ ನಡೆದ ಕೋಳಿ ಅಂಕದ ವಿಚಾರದಲ್ಲಿ ಪಾಣಾಜೆ ಗ್ರಾಮದ ಆರ್ಲಪದವಿನ ಯುವಕನೊಬ್ಬನ ಮೇಲೆ ಕೇರಳದ ಇಬ್ಬರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ನಡೆದಿದೆ.
ಆರ್ಲಪದವಿನ ಪ್ರಕಾಶ್ (28) ಹಲ್ಲೆಗೊಳಗಾದವರು. ಕೇರಳದ ವಾಣಿ ನಗರದಲ್ಲಿ ಮೇ. 24ರಂದು ಕೋಳಿ ಅಂಕ ನಡೆದಿತ್ತು. ಅಲ್ಲಿ ಪ್ರಕಾಶ್ ಗಲಾಟೆ ಮಾಡಿದ್ದರು ಎಂದು ಹೇಳಿ ಧನಂಜಯ ಮತ್ತು ಪುನೀತ್ ಎಂಬವರು ಮರುದಿನ ರಾತ್ರಿ ಅರ್ಧಮೂಲೆ ವೈನ್‌ಶಾಪ್ ಬಳಿ ಪ್ರಕಾಶ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಕಾಶ್ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಪುತ್ತೂರು: ಮಹಿಳೆಯೊಬ್ಬರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ವಿಶ್ವನಾಥ್ ಅವರ ಪತ್ನಿ ಸೀತಾಲಕ್ಷ್ಮಿ (50) ಆತ್ಮಹತ್ಯೆ ಮಾಡಿಕೊಂಡವರು.
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಸೀತಾಲಕ್ಷ್ಮಿ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಕೊಟ್ಟಿಗೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.