
ಕಡರನಾಯ್ಕನಹಳ್ಳಿ: ‘ಪ್ರತಿಭೆಗಳು ಪ್ರಕಾಶಿಸುವಂತಾಗಲು ಪ್ರತಿಭಾ ಕಾರಂಜಿ ಸಹಕಾರಿ. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಯನ್ನು ಅನಾವರಣ ಮಾಡುವ ಕಾರ್ಯಕ್ರಮ ಇದಾಗಿದೆ’ ಎಂದು ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶ್ರೀ ಹೇಳಿದರು.
ಸಮೀಪದ ನಂದಿಗುಡಿ ಗ್ರಾಮದ ನಂದೀಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊಕ್ಕನೂರು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ಕನ್ನಡ ನಾಡು ಸಾಹಿತ್ಯದ ಬೀಡಾಗಿದೆ. ಕಲೆ, ಸಂಸ್ಕೃತಿಗಳು ಮಕ್ಕಳಲ್ಲಿ ಅರಳುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಅವರಲ್ಲಿನ ಕಲೆಯನ್ನು ಗುರುತಿಸಿ ಪ್ರತಿಭಾ ಕಾರಂಜಿಯಲ್ಲಿ ಅನಾವರಣಗೊಂಡರೆ ಪ್ರತಿಭೆ ಹೊರಹೊಮ್ಮಲು ಸಹಕಾರಿ ಆಗುತ್ತದೆ’ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
‘ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬವಾಗಿದೆ. ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ. ಪಠ್ಯದ ಜೊತೆಗೆ ಸಾಂಸ್ಕೃತಿಕ ಕಲೆಯೂ ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಹೇಳಿದರು.
ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಸಿದ್ದಪ್ಪ ಸಂಘಣ್ಣನವರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಡಿ.ವಿ. ವಿನೋದ ಮಾತನಾಡಿದರು.
ವಿದ್ಯಾರ್ಥಿನಿ ಎಂ.ಕೆ. ಲೇಖನಾ ಪ್ರದರ್ಶಿಸಿದ ಭರತನಾಟ್ಯ ಗಮನ ಸೆಳೆಯಿತು. ವಿವಿಧ ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು ಆಕರ್ಷಿಸಿದರು. ಮೊಸಳೆ, ಮಹಡಿ ಮನೆ, ವಿವಿಧ ಮೂರ್ತಿಗಳು ಮಕ್ಕಳಿಂದ ರಚಿಸಲ್ಪಟ್ಟವು. ಜಾನಪದ, ಏಕಪಾತ್ರಾಭಿನಯ, ಸಾಮೂಹಿಕ ನೃತ್ಯ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ನಂದೀಶ್ವರ ಪ್ರಾಥಮಿಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಲೋಕೇಶ್, ರಾಜಾನಾಯ್ಕ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ಜಿ. ಕೆಂಚವೀರಯ್ಯ, ಸರ್ಕಾರಿ ನೌಕರರ ಸಂಘದ ಪೀರುನಾಯ್ಕ, ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿ. ನಾಗೇಂದ್ರಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಾದ ಗಿರೀಶ್ ಕೋಟೆ ಗೌಡ್ರು, ಎಚ್. ಪ್ರವೀಣ್, ಕೆ. ಆಂಜನೇಯ ಮತ್ತು ಇಸಿಒ ಶಿವಮೂರ್ತಿ, ಹರಿಹರ ತಾಲ್ಲೂಕು ಎಲ್ಲ ಕ್ಲಸ್ಟರ್ ಸಿಆರ್‌ಪಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.