ADVERTISEMENT

ಬಾಂಬ್‌ಗಿಂತ ಮಾದಕ ವಸ್ತು ಅಪಾಯಕಾರಿ

ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಕಳವಳ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:54 IST
Last Updated 26 ಜೂನ್ 2025, 15:54 IST
ದಾವಣಗೆರೆಯ ರೇಣುಕ ಮಂದಿರದಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿದರು
ದಾವಣಗೆರೆಯ ರೇಣುಕ ಮಂದಿರದಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿದರು   

ದಾವಣಗೆರೆ: ದೇಶವನ್ನು ನಾಶಪಡಿಸಲು ಬಾಂಬ್‌ಗಳು ಬೇಕಾಗಿಲ್ಲ. ಮಾದಕ ವಸ್ತುಗಳೇ ರಾಷ್ಟ್ರವೊಂದನ್ನು ಸರ್ವನಾಶ ಮಾಡುವಷ್ಟು ಅಪಾಯಕಾರಿಯಾಗಿವೆ ಎಂದು ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ರೇಣುಕ ಮಂದಿರದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದ ಪ್ರತಿ ರಾಷ್ಟ್ರಗಳಿಗೂ ಮಾದಕವಸ್ತು ಜಾಲ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದರಲ್ಲಿ ಶ್ರೀಮಂತ, ಬಡ ದೇಶ ಎಂಬ ಭಿನ್ನತೆ ಇಲ್ಲ. ಇದೊಂದು ಕತ್ತಲ ಪ್ರಪಂಚವಾಗಿದ್ದು, ಯುವ ಸಮೂಹ ಜಾಗೃತವಾಗುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯೊಬ್ಬ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆರ್ಥಿಕವಾಗಿ ದಿವಾಳಿಯಾಗಿ, ಇಡೀ ಜೀವನವನ್ನೇ ಕಳೆದುಕೊಳ್ಳುತ್ತಾನೆ. ಇದರಿಂದ ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದರು.

‘ವಿಶ್ವದಾದ್ಯಂತ ಮಾದಕ ವಸ್ತು ಜಾಲಕ್ಕೆ ಮಕ್ಕಳು ಮತ್ತು ಯುವಕರು ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ಮಾದವ್ ವಿಠ್ಠಲ್ ರಾವ್ ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಜ್ಞಾವಿಧಿ ಬೋಧಿಸಿದರು. ಚಿತ್ರನಟಿ ಆದಿತಿ ಪ್ರಭುದೇವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಮಂಜುನಾಥ, ಡಿಡಿಪಿಐ ಜಿ.ಕೊಟ್ರೇಶ್ ಹಾಜರಿದ್ದರು.

‘ಶಾಲೆ ಕಾಲೇಜಿನ ಮೇಲೆ ನಿಗಾ’

ದಾವಣಗೆರೆ ನಗರದಲ್ಲಿ 500ಕ್ಕೂ ಹೆಚ್ಚು ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಲೆ–ಕಾಲೇಜುಗಳ ಮೇಲೆ ನಿಗಾ ಇಡಲಾಗಿದ್ದು ವಿದ್ಯಾರ್ಥಿಗಳು ಮಾದಕ ವಸ್ತು ಜಾಲದಿಂದ ದೂರ ಇರಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಲಹೆ ನೀಡಿದರು. ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ‘ಮಾದಕ ವಸ್ತುಗಳ ಸಾಗಣೆ ಸೇವನೆ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ದಾರಿ ತಪ್ಪಿದರೆ ಭವಿಷ್ಯದ ಜೀವನ ಸರ್ವನಾಶವಾಗಲಿದೆ. ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಡಿ.ಕೆ. ವೇಲಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.