ADVERTISEMENT

‘ಪರಿಶ್ರಮವಿದ್ದರೆ ಮೀಸಲಾತಿಯ ಅವಶ್ಯಕತೆ ಇಲ್ಲ’: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:24 IST
Last Updated 1 ಜೂನ್ 2025, 14:24 IST
ಹೊನ್ನಾಳಿಯಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸೋಮನಗೌಡ ಪಾಟೀಲ್ ಉದ್ಘಾಟಿಸಿದರು
ಹೊನ್ನಾಳಿಯಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸೋಮನಗೌಡ ಪಾಟೀಲ್ ಉದ್ಘಾಟಿಸಿದರು   

ಹೊನ್ನಾಳಿ: ಸತತ ಪ್ರಯತ್ನ, ಪರಿಶ್ರಮ, ಪ್ರೋತ್ಸಾಹ ಇದ್ದರೆ, ಉನ್ನತ ಹುದ್ದೆಗೇರಲು ಯಾವ ಮೀಸಲಾತಿಯ ಅವಶ್ಯಕತೆಯೂ ಇಲ್ಲ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಿರೇಕಲ್ಮಠದ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದ ಡಾ. ಸಚಿನ್ ಬಸವರಾಜ ಗುತ್ತೂರು ಅವರನ್ನು ಸನ್ಮಾನಿಸಿ ಮಾತನಾಡಿದರು.

ಮೀಸಲಾತಿ ಶೇ 2 ರಿಂದ 3ರಷ್ಟು ಮಾತ್ರ ಇರುತ್ತದೆ. ಆದರೆ ಆಸಕ್ತಿ, ಸತತ ಅಭ್ಯಾಸ, ಪರಿಶ್ರಮ ಪಟ್ಟರೆ ಯಾರಾದರೂ ಉನ್ನತ ಸ್ಥಾನಮಾನಗಳಿಗೆ ಹೋಗಬಹುದು. ಡಾ. ಸಚಿನ್ ಅವರು ಮೂರು ಪ್ರಯತ್ನಗಳ ನಂತರ ಈ ಸಾಧನೆ ಮಾಡಿದ್ದಾರೆ. ಮೊದಲ ಪ್ರಯತ್ನ ವಿಫಲವಾದಾಗ ಅವರು ಕೈ ಚೆಲ್ಲಿದ್ದರೆ ಈಗ ರ‍್ಯಾಂಕ್ ಪಡೆಯುತ್ತಿರಲಿಲ್ಲ ಎಂದರು.

ADVERTISEMENT

ಪ್ರಸಕ್ತ ಸಾಲಿನಲ್ಲಿ ಮಠದಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದೇವೆ. ತಮ್ಮ ಮಕ್ಕಳನ್ನು ಓದಿಸಲು ಸಾಧ್ಯವಿಲ್ಲದವರು ತಮ್ಮ ಮಕ್ಕಳನ್ನು ಮಠಕ್ಕೆ ಕಳುಹಿಸಿದರೆ ಅವರಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಈ ವರ್ಷ ಹಮ್ಮಿಕೊಳ್ಳಲಾಗುವುದು. ಹೊನ್ನಾಳಿ, ನ್ಯಾಮತಿ ತಾಲ್ಲೂಕಿನಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಿಂದ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಶಿಫಾರಸು ಮಾಡಿ ಕಳಿಸಿ. ಈ ಬಾರಿ ನಮ್ಮ ಸಮಾಜದಿಂದ ಐಎಎಸ್, ಐಎಫ್‍ಎಸ್, ಐಪಿಎಸ್ ಪರೀಕ್ಷೆಯಲ್ಲಿ ನಾಲ್ವರು ಪಾಸಾಗಿದ್ದು ಅವರನ್ನು ಅಭಿನಂದಿಸಲಾಗುವುದು ಎಂದು ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.

ಸರಿಯಾದ ಗುರಿ, ಉತ್ತಮ ಪರಿಸರ, ಸ್ಪಷ್ಟತೆ, ಪರಿಶ್ರಮ, ಸ್ಮಾರ್ಟ್ ವೇಳಾಪಟ್ಟಿ ಇಟ್ಟುಕೊಂಡು ಓದಿದರೆ ಯಾವ ಪರೀಕ್ಷೆಯನ್ನಾದರೂ ಪಾಸು ಮಾಡಬಹುದು ಎಂದು ಐಎಎಸ್ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದ ಡಾ. ಸಚಿನ್ ಬಸವರಾಜ ಹೇಳಿದರು. 

ರಾಜ್ಯ ಘಟಕದ ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್, ಪಿ. ವೀರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಮಠದ ಆಡಳಿತಾಧಿಕಾರಿ ರಾಜಕುಮಾರ್, ಮುಖಂಡ ಪರಮೇಶ್ ಪಟ್ಟಣಶೆಟ್ಟಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ, ಶಿಲ್ಪಾ ರಾಜುಗೌಡ, ಉಪನ್ಯಾಸಕ ಎಚ್.ಬಿ. ಅಶೋಕ್ ಇತರರು ಉಪಸ್ಥಿತರಿದ್ದರು. ಗಿರೀಶ್ ಎನ್.ಎಂ. ಕಾರ್ಯಕ್ರಮ ನಡೆಸಿಕೊಟ್ಟರು.

2ಇಪಿ : ಐಎಎಸ್ ಪರೀಕ್ಷೆಯಲ್ಲಿ 41 ನೇ ರ್ಯಾಂಕ್ ಪಡೆದ ಡಾ. ಸಚಿನ್ ಬಸವರಾಜ ಗುತ್ತೂರು ಹಾಗೂ ಅವರ ತಂದೆ ತಾಯಿಗಳನ್ನು ತಾ ಪಂಚಮಸಾಲಿ ಸಮಾಜದಿಂದ ಸನ್ಮಾನಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.