
ಜಗಳೂರು: ಶಾಸಕ ಬಿ. ದೇವೇಂದ್ರಪ್ಪ ಅವರು ಶನಿವಾರ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬೈಕ್‌ನಲ್ಲಿ ಪಟ್ಟಣ ಪ್ರದಕ್ಷಿಣೆ ಹಾಕುವ ಮೂಲಕ ರಸ್ತೆ ವಿಸ್ತರಣೆ ಕಾಮಗಾರಿ, ಹಾಸ್ಟೆಲ್ ಭೇಟಿ ಹಾಗೂ ಕುರಿಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಹೊರಟ ಶಾಸಕರು, ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ಕಾರ್ಯವನ್ನು ವೀಕ್ಷಿಸಿದರು.
ಮಹಾತ್ಮಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ಮಾಲೀಕರೇ ಸ್ವ– ಇಚ್ಛೆಯಿಂದ ತೆರವುಗೊಳಿಸಿಕೊಳ್ಳುತ್ತಿದ್ದಾರೆ. ವಿಸ್ತರಣೆ ಕಾಮಗಾರಿ ಪ್ರಕ್ರಿಯೆಯನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಬಹುತೇಕ ಮಾಲೀಕರು ಐದಾರು ದಿನಗಳಿಂದ ಬಿರುಸಿನಿಂದ ತಾವೇ ಕಟ್ಟಡಗಳನ್ನು ಒಡೆದುಕೊಳ್ಳುತ್ತಿದ್ದಾರೆ. ಕೆಲವು ಮಾಲೀಕರು ವಿಸ್ತರಣೆಗೆ ಸಹಕಾರ ನೀಡದೆ ಕಾದು ನೋಡುತ್ತಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟಡಗಳ ಬಳಿ ತೆರಳಿ ವೀಕ್ಷಿಸಿದ ಶಾಸಕರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ದಶಕಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ವಿಸ್ತರಣಾ ಕಾರ್ಯ ಚುರುಕು ಪಡೆದಿದೆ. ರಸ್ತೆ ವಿಸ್ತರಣೆಗೆ ಒಪ್ಪದ ಕೆಲವು ವರ್ತಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಅಧಿಕಾರಿಗಳು ಮುಕ್ತವಾಗಿ ಈ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.
‘ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಅಗತ್ಯ ದಾಖಲೆಗಳಿರುವ ಕಟ್ಟಡಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ. ತೆರವು ಮಾಡಬೇಕು ಎಂದು ಕೋರ್ಟ್ ಆದೇಶಿಸಿದ್ದು, ಕೋರ್ಟ್ ಆದೇಶದಂತೆ ಪರಿಹಾರ ನೀಡಿ ಕಟ್ಟಡ ಒಡೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪಟ್ಟಣದ ದಾವಣಗೆರೆ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿ ಪ್ರತಿ ಶನಿವಾರ ನಡೆಯಲಿರುವ ಕುರಿಸಂತೆ ಮಾರುಕಟ್ಟೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕರು ತಲಾ ₹ 8,000ದಂತೆ ಎರಡು ಕುರಿಮರಿಗಳನ್ನು ಖರೀದಿಸಿದರು. ನಂತರ ಸಮೀಪದ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಮಕ್ಕಳ ಕಲಿಕೆ, ಊಟ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.
ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಷಂಷೀರ್ ಅಹ್ಮದ್, ಚಿತ್ತಪ್ಪ, ಕೃಷ್ಣಪ್ಪ, ಮರೇನಹಳ್ಳಿ ಶೇಖರಪ್ಪ, ಅಜ್ಜಪ್ಪ, ಆರ್. ವೆಂಕಟೇಶ್ ಗೊಲ್ಲರಹಟ್ಟಿ, ದಾದಾಪೀರ್ ಶೇಕ್, ನಾಗರಾಜ ನಾಯಕ, ಎ.ಎಲ್. ತಿಪ್ಪೇಸ್ವಾಮಿ, ಕೆಚ್ಚೇನಹಳ್ಳಿ ಬಸಣ್ಣ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.