ADVERTISEMENT

ಲೋಕ ಅದಾಲತ್‌: ತಗ್ಗಲಿದೆ ಕೋರ್ಟ್ ಮೇಲಿನ ಹೊರೆ

ಜಗಳೂರು: ಮೆಗಾ ಲೋಕ ಅದಾಲತ್ ಪೂರ್ವಬಾವಿ ಸಭೆ: ಕರೆಣ್ಣವರ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:14 IST
Last Updated 26 ಜೂನ್ 2025, 14:14 IST
ಜಗಳೂರಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗುರುವಾರ ನಡೆದ ಮೆಗಾ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶ ಮಹಾವೀರ್ ಕರೆಣ್ಣವರ್ ಮಾತನಾಡಿದರು 
ಜಗಳೂರಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗುರುವಾರ ನಡೆದ ಮೆಗಾ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶ ಮಹಾವೀರ್ ಕರೆಣ್ಣವರ್ ಮಾತನಾಡಿದರು    

ಜಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಕೋರ್ಟ್‌ಗಳಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಲೋಕ ಅದಾಲತ್ ಕಾರ್ಯಕ್ರಮಗಳಿಂದಾಗಿ ಕೋರ್ಟ್‌ಗಳ ಮೇಲಿನ ಹೊರೆ ಕಡಿಮೆಯಾಗುವುದಲ್ಲದೇ, ಸ್ವಸ್ಥ, ನೆಮ್ಮದಿಯ ಸಮಾಜಕ್ಕೆ ಕಾರಣವಾಗಲಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಅಭಿಪ‍್ರಾಯಪಟ್ಟರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗುರುವಾರ ನಡೆದ ಮೆಗಾ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಗಳೂರಿನಂತಹ ತಾಲ್ಲೂಕು ನ್ಯಾಯಾಲಯದಲ್ಲೇ 2,500ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕ್ಷುಲ್ಲಕ ಕಾರಣಗಳಿಗಾಗಿ ಜಗಳ, ವಿವಾದಗಳಿಗೆ ಕಾರಣವಾಗಿ ವರ್ಷಾನುಗಟ್ಟಲೆ ಕೋರ್ಟ್‌ಗಳಿಗೆ ಅಲೆದಾಡಬೇಕಾದ ಸ್ಥಿತಿ ಇದೆ. ಕಾನೂನಿಗನುಗುಣವಾಗಿ ಪ್ರತಿಯೊಬ್ಬರೂ ನಡೆದಲ್ಲಿ ವ್ಯಾಜ್ಯಗಳಿಗೆ ಆಸ್ಪದವಿರುವುದಿಲ್ಲ. ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕು. ರಾಜೀ ಸಂಧಾನದಿಂದ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ’ ಎಂದು ಹೇಳಿದರು.

ADVERTISEMENT

‘ಪ್ರಸಕ್ತ ವರ್ಷದ ಎರಡನೇ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ಜುಲೈ 12ರಂದು ನಡೆಯಲಿದ್ದು, ಕಕ್ಷಿದಾರರು, ವಕೀಲರು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪ್ರವೀಣ್ ಕುಮಾರ್ ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಅಮರ್, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್. ಚೇತನ್, ವಕೀಲರ ಸಂಘದ ಕಾರ್ಯದರ್ಶಿ ಎ.ಕೆ.ಪರಶುರಾಮ್, ಎಪಿಪಿ ಮಂಜುನಾಥ್, ತಹಶೀಲ್ದಾರ್ ಕಲೀಂ ಉಲ್ಲಾ, ಸಿಪಿಐ ಸಿದ್ದರಾಮಯ್ಯ, ನಾಗರಾಜ್, ಗಾದಿಲಿಂಗಪ್ಪ, ಸಿಡಿಪಿಒ ಬೀರೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.