ADVERTISEMENT

ಯುವತಿಯರ ಬಾಳಿಗೆ ಬೆಳಕಾದ ವಿವಾಹ

ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಮದುವೆ ಸಂಭ್ರಮ, ಅಧಿಕಾರಿಗಳ ಪೌರೋಹಿತ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:50 IST
Last Updated 1 ನವೆಂಬರ್ 2025, 5:50 IST
ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ವಧು–ವರರಾದ ಬಸವರಾಜ್ ಮತ್ತು ರಕ್ಷಿತಾ, ಪ್ರವೀಣ್ ಮತ್ತು ರುಚಿತಾ, ನಾಗರಾಜ್ ಮತ್ತು ಶಾಲಿನಿ ಜೋಡಿ ಅರುಂಧತಿ ನಕ್ಷತ್ರ ನೋಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ವಧು–ವರರಾದ ಬಸವರಾಜ್ ಮತ್ತು ರಕ್ಷಿತಾ, ಪ್ರವೀಣ್ ಮತ್ತು ರುಚಿತಾ, ನಾಗರಾಜ್ ಮತ್ತು ಶಾಲಿನಿ ಜೋಡಿ ಅರುಂಧತಿ ನಕ್ಷತ್ರ ನೋಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ   

ದಾವಣಗೆರೆ: ಹೊಸಬಟ್ಟೆ ತೊಟ್ಟು ಹಸೆಮಣೆ ಏರಿದ್ದ ಜೋಡಿಗಳು ಹಾರ ಬದಲಾಯಿಸಿಕೊಳ್ಳಲು ಸಜ್ಜಾದರು. ಶಾಸ್ತ್ರೋಕ್ತವಾಗಿ ವಿವಾಹ ಕೈಂಕರ್ಯ ನಡೆಯುತ್ತಿರುವಾಗ ಎಲ್ಲರ ಕೈಗಳಿಗೆ ಅಕ್ಷತೆ ತಲುಪಿದ್ದವು. ಗಟ್ಟಿಮೇಳ ಮೊಳಗುತ್ತಿದ್ದಂತೆ ವಧುಗಳ ಕಂಗಳಿಂದ ಜಾರಿದ ಆನಂದಬಾಷ್ಪ ಭೂಮಿಯನ್ನು ಸ್ಪರ್ಶಿಸಿತು.

ಇಲ್ಲಿನ ಶ್ರೀರಾಮನಗರದ ರಾಜ್ಯ ಮಹಿಳಾ ವಸತಿ ನಿಲಯ ಶುಕ್ರವಾರ ಮದುವೆ ಮನೆಯಾಗಿತ್ತು. ನಿಲಯದ ಆವರಣದಲ್ಲಿ ಚಪ್ಪರ ಹಾಕಿ, ಮಂಟಪ ನಿರ್ಮಿಸಲಾಗಿತ್ತು. ಸಂಭ್ರಮ, ಸಂತಸ ಮೇಳೈಸಿತ್ತು. ನವವಿವಾಹಿತರು ಅರುಂಧತಿ ನಕ್ಷತ್ರ ಕಣ್ತುಂಬಿಕೊಂಡ ಬಳಿಕ ಸಂಬಂಧಿಕರು ಶುಭಹಾರೈಸಿದರು.

ರಾಜ್ಯ ಮಹಿಳಾ ವಸತಿ ನಿಲಯದ ಮೂವರು ಯುವತಿಯರ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೌರೋಹಿತ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿಲಯದ ನಿವಾಸಿ ಎ. ರುಚಿತಾ ಎಸ್‌ಪಿಎಸ್‌ ನಗರದ ಎನ್‌. ಪ್ರವೀಣ್‌ ಕೈಹಿಡಿದರು. ಟಿ. ರಕ್ಷಿತಾ ಹರಿಹರ ತಾಲ್ಲೂಕಿನ ಷಂಷೀಪುರದ ಬಿ.ಎಂ. ಬಸವರಾಜ್‌ ಅವರನ್ನು ವರಿಸಿದರು. ಎಲ್‌.ಶಾಲಿನಿ ಅವರು ಅಣಜಿ ಗ್ರಾಮದ ಎಂ.ಎಚ್‌. ನಾಗರಾಜ್‌ ಅವರೊಂದಿಗೆ ಸಪ್ತಪದಿ ತುಳಿದರು.

ADVERTISEMENT

ಮದುವೆ ನಿಶ್ಚಯವಾಗುತ್ತಿದ್ದಂತೆ ಮಹಿಳಾ ವಸತಿ ನಿಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಕೈಗಳಿಗೆ ಮೆಹಂದಿ ಹಾಕಿ, ಬಳೆ ಹಾಗೂ ಅರಿಸಿನ ಶಾಸ್ತ್ರ ಮುಗಿಸಲಾಯಿತು. ಶುಕ್ರವಾರ ಬೆಳಿಗ್ಗೆ ವರ ಹಾಗೂ ಅವರ ಕುಟುಂಬದ ಸಂಬಂಧಿಕರನ್ನು ಮಹಿಳಾ ನಿಲಯಕ್ಕೆ ಸ್ವಾಗತಿಸಲಾಯಿತು. ವಧು–ವರರಿಗೆ ಬಾಸಿಂಗ ಕಟ್ಟಿ, ಮಂಟಪಕ್ಕೆ ಕರೆತರಲಾಯಿತು. ಪುರೋಹಿತರು ವಿವಾಹ ಕೈಂಕರ್ಯಗಳನ್ನು ನೆರವೇರಿಸಿದರು. ವಿವಾಹಕ್ಕೆ ಬಂದಿದ್ದ ಎಲ್ಲರಿಗೂ ಸಿಹಿ ಊಟ ಬಡಿಸಲಾಯಿತು.

ಪರಿತ್ಯಕ್ತ ಯುವತಿಯರು: 18 ವರ್ಷ ಮೇಲ್ಪಟ್ಟವರಿಗೆ ಆಶ್ರಯ ಕಲ್ಪಿಸಲು 1977ರಲ್ಲಿ ಸ್ಥಾಪನೆಯಾದ ಮಹಿಳಾ ವಸತಿ ನಿಲಯದಲ್ಲಿ ರುಚಿತಾ, ಶಾಲಿನಿ ಹಾಗೂ ರಕ್ಷಿತಾ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಶಿಕ್ಷಣ ಮೊಟಕುಗೊಂಡಿದ್ದ ಇವರಿಗೆ ನಿಲಯದಲ್ಲಿ ಕೌಶಲ ತರಬೇತಿ ನೀಡಲಾಗಿದೆ.

ಶಾಲಿನಿ ಹಾಗೂ ರುಚಿತಾ ಅವರಿಗೆ ತಾಯಿ ಇಲ್ಲ. ಚಿಕ್ಕ ವಯಸ್ಸಿನಲ್ಲಿ ತಾಯಂದಿರನ್ನು ಕಳೆದುಕೊಂಡ ಇವರಿಂದ ತಂದೆ ಕೂಡ ದೂರ ಸರಿದಿದ್ದಾರೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ರಕ್ಷಿತಾಗೆ ಸಹೋದರ ಆಶ್ರಯ ನಿರಾಕರಿಸಿದ್ದರಿಂದ ಮಹಿಳಾ ನಿಲಯ ಸೇರಬೇಕಾಯಿತು. ನಿಲಯದಲ್ಲೇ ಬೆಳೆದ ಇವರ ವಿವಾಹದಲ್ಲಿ ಸಿಬ್ಬಂದಿ ಮನೆ ಮಕ್ಕಳ ಮದುವೆಯಂತೆ ಲಗುಬಗೆಯಿಂದ ತೊಡಗಿಸಿಕೊಂಡಿದ್ದರು.

ಅರ್ಜಿ ಸಲ್ಲಿಸಿದ್ದ ಯುವಕರು: ವಧು ಬೇಕಿರುವ ಯುವಕರು ರಾಜ್ಯ ಮಹಿಳಾ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಲಯದ ನಿವಾಸಿಗಳಾದ ಯುವತಿಯರ ಒಪ್ಪಿಗೆ ಪಡೆದು ವಿವಾಹ ನಿಶ್ಚಯ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಈ ವಿವಾಹ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಲಿದೆ.

‘ಎರಡೂವರೆ ಎಕರೆ ಅಡಿಕೆ ತೋಟವಿದ್ದು, ಕೃಷಿಕನಾಗಿದ್ದೇನೆ. ಹಲವು ವರ್ಷಗಳಿಂದ ವಧು ಹುಡುಕಿದರೂ ಸಿಕ್ಕಿರಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ ಮಹಿಳಾ ವಸತಿ ನಿಲಯ ಸಂಪರ್ಕಿಸಿದ್ದೆ. ರಕ್ಷಿತಾ ಅವರನ್ನು ಕೈಹಿಡಿಯಲು ಖುಷಿಯಾಗಿದೆ’ ಎಂದು ಹರಿಹರ ತಾಲ್ಲೂಕಿನ ಷಂಷೀಪುರದ ಬಿ.ಎಂ. ಬಸವರಾಜ್‌ ಸಂತಸ ಹಂಚಿಕೊಂಡರು.

‘ಫರ್ನಿಚರ್‌ ಅಂಡಿಯೊಂದರಲ್ಲಿ ಕೆಲಸ ಮಾಡುವ ನನಗೆ ವಧು ಸಿಗುತ್ತಿರಲಿಲ್ಲ. ಮಹಿಳಾ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ಕಾಯುತ್ತಿದ್ದೆ. ರುಚಿತಾ ಅವರನ್ನು ಸಂತೋಷದಿಂದ ವರಿಸಿದ್ದೇನೆ’ ಎಂದು ಎನ್‌.ಪ್ರವೀಣ್‌ ಸಂತಸ ಹಂಚಿಕೊಂಡರು.

ಸಾಮಾನ್ಯವಾಗಿ ಈವರೆಗೆ ಬೇರೆ ಜಿಲ್ಲೆಯ ಯುವಕರು ಮಹಿಳಾ ವಸತಿ ನಿಲಯ ಸಂಪರ್ಕಿಸುತ್ತಿದ್ದರು. ಈವರೆಗೆ 43 ವಿವಾಹಗಳು ನಿಲಯದಲ್ಲಿ ನಡೆದಿದ್ದು, ಹೆಚ್ಚು ಯುವತಿಯರು ಉತ್ತರ ಕನ್ನಡ ಜಿಲ್ಲೆ ಸೇರಿದ್ದಾರೆ. ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಯುವಕರು ಕೂಡ ಮಹಿಳಾ ನಿಲಯದ ವಧುಗಳತ್ತ ಒಲವು ತೋರಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾ ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್‌.ಕವಿತಾ ಮದುವೆಗೆ ಸಾಕ್ಷಿಯಾದರು.

ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ನವದಂಪತಿಗಳಾದ ಪ್ರವೀಣ್ ಮತ್ತು ರುಚಿತಾ ನಾಗರಾಜ್ ಮತ್ತು ಶಾಲಿನಿ ಹಾಗೂ ಬಸವರಾಜ್ ಮತ್ತು ರಕ್ಷಿತಾ ಜೋಡಿಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲ್‌ ರಾವ್ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ ಹರಸಿದರು -ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ಪ್ರವೀಣ್ ಮತ್ತು ರುಚಿತಾ ನಾಗರಾಜ್ ಮತ್ತು ಶಾಲಿನಿ ಹಾಗೂ ಬಸವರಾಜ್ ಮತ್ತು ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು -ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ

ಮೌನಕ್ಕೆ ಮನಸೋತರು

ವಾಕ್‌ ಮತ್ತು ಶ್ರವಣದೋಷ ಹೊಂದಿರುವ ಶಾಲಿನಿ ಮತ್ತು ನಾಗರಾಜ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮಾತಿನ ಮೌನಕ್ಕೆ ಸಂಬಂಧಿಕರು ಮನನೋಸತರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶಾಲಿನಿ ಹಲವು ವರ್ಷಗಳಿಂದ ಮಹಿಳಾ ನಿಲಯದ ಆಶ್ರಯದಲ್ಲಿದ್ದಾರೆ. ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮದ ನಾಗರಾಜ್‌ ಕೃಷಿಕರಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಾಕ್‌ ಮತ್ತು ಶ್ರವಣದೋಷ ಇರುವ ವಧುವನ್ನೇ ವಿವಾಹವಾಗುವ ಇಚ್ಛೆಯಿಂದ ಮಹಿಳಾ ನಿಲಯಕ್ಕೆ ಅರ್ಜಿ ಸಲ್ಲಿಸಿ ಮೂರು ವರ್ಷಗಳಿಂದ ಕಾಯುತ್ತಿದ್ದರು. ‘ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ನಾಗರಾಜ್‌ ಸಾಮಾನ್ಯ ಯುವತಿಯನ್ನು ವರಿಸುವ ಅವಕಾಶವಿತ್ತು. ಆದರೆ ತನ್ನಂತೆಯೇ ಸಂಜ್ಞೆಯಲ್ಲಿ ಸಂವಹನ ಮಾಡುವ ವಧುವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇಂತಹ ಯುವತಿಯರ ವಿವರಗಳನ್ನು ನೀಡಿ ಬಾಂಧವ್ಯ ಏರ್ಪಡಿಸಲು ನೆರವಾದೆವು’ ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.