
ದಾವಣಗೆರೆ: ಯುದ್ಧ ವಿಮಾನ ತೇಜಸ್ ಸೇರಿದಂತೆ 55 ವಿಮಾನಗಳಲ್ಲಿ 5,200 ಗಂಟೆ ಹಾರಾಟ ನಡೆಸಿದ ಅನುಭವ ಹೊಂದಿರುವ ಮೂಲತಃ ದಾವಣಗೆರೆಯ ಏರ್ ಮಾರ್ಷಲ್ ಫಿಲಿಪ್ ರಾಜ್‌ಕುಮಾರ್ ಅವರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ವಾಯುಪಡೆಯಲ್ಲಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಜ್‌ಕುಮಾರ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಶನಿವಾರ ನಡೆಯುವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
‘ವೈದ್ಯರಾಗಿದ್ದ ತಂದೆ ದಾವಣಗೆರೆ ಆಸ್ಪತ್ರೆಯಲ್ಲಿ ಸಹಾಯಕ ಸರ್ಜನ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದರು. 1941ರಲ್ಲಿ ದಾವಣಗೆರೆಯಲ್ಲಿ ಜನಿಸಿದರೂ ಶಿಕ್ಷಣ ಪಡೆದಿದ್ದು ಮೈಸೂರು ಮತ್ತು ಬೆಂಗಳೂರಿನಲ್ಲಿ. 1960ರಲ್ಲಿ ಕೇಂದ್ರೀಯ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆ ಬರೆದು ವಾಯುಪಡೆ ಸೇರಿದೆ’ ಎಂದು ಫಿಲಿಪ್ ರಾಜ್‌ಕುಮಾರ್ ಅವರು ‘ಪ್ರಜಾವಾಣಿ’ ಜೊತೆಗೆ ಸಂತಸ ಹಂಚಿಕೊಂಡರು.
ಫಿಲಿಪ್ ರಾಜ್‌ಕುಮಾರ್ 1962ರಲ್ಲಿ ವಾಯುಪಡೆ ಸೇರಿದಾಗ ಭಾರತ ಮತ್ತು ಚೀನಾ ಯುದ್ದ ನಡೆಯುತ್ತಿತ್ತು. ಯುದ್ದ ವಿಮಾನ ಹಾರಾಟ ಆರಂಭಿಸಿದ ಇವರು 9 ವರ್ಷ ಈ ಹುದ್ದೆ ನಿರ್ವಹಿಸಿದರು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
‘ಪಾಕಿಸ್ತಾನದ ಸೇನಾ ವಾಯುನೆಲೆ ಸರ್ಗೋದಾ ಮೇಲೆ ನಡೆದ ದಾಳಿಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಭಾರತೀಯ ವಾಯುಸೇನೆಯಲ್ಲಿ ಇದೊಂದು ಅತ್ಯಂತ ಸಾಹಸಮಯ ಕಾರ್ಯಾಚರಣೆ ಎಂದೇ ಹೆಸರಾಗಿದೆ. ಪಾಕಿಸ್ತಾನದ ಮೇಲೆ ನಿರಂತರ ದಾಳಿ ನಡೆಸಿದ್ದರಿಂದ 1971ರಲ್ಲಿ ಪ್ರಾನ್ಸ್‌ಗೆ ಯುದ್ದವಿಮಾನ ತರಬೇತಿಗೆ ಕಳುಹಿಸಲಾಗಿತ್ತು’ ಎಂದು ನೆನಪಿಸಿಕೊಂಡರು.
ಫ್ರಾನ್ಸ್‌ನಿಂದ ಮರಳಿದ ರಾಜ್‌ಕುಮಾರ್ ಅವರು ಬೆಂಗಳೂರಿನ ವಿಮಾನ ಪರೀಕ್ಷಾ ಕೇಂದ್ರದಲ್ಲಿ 13 ವರ್ಷ ಕಾರ್ಯನಿರ್ವಹಿಸಿದರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿದರು. ಭಾರತದ ವೈಮಾನಿಕ ಕ್ಷೇತ್ರದಲ್ಲಿ ಲಘು ಯುದ್ಧ ವಿಮಾನ ತೇಜನ್ ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ವಾಯುಪಡೆಯಿಂದ ನಿವೃತ್ತಿ ಹೊಂದಿದ ಬಳಿಕ ರಕ್ಷಣಾ ಇಲಾಖೆಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.