
ಸಾಸ್ವೆಹಳ್ಳಿ: ಕುಳಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ತೀವ್ರ ಸಮಸ್ಯೆಯಾಗುತ್ತಿದೆ ಎಂದು ಕುಳಗಟ್ಟೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ರಸ್ತೆಗಳಿಂದಾಗಿ ಓಡಾಡಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
‘ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಆದರೆ, ಈಗ ಬರುತ್ತಿರುವ ಅನುದಾನವು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸಾಕಾಗುತ್ತಿಲ್ಲ. ಬಂದ ಅನುದಾನದಲ್ಲಿ ಅರ್ಧ ಮಾತ್ರ ಕೆಲಸ ಆಗುತ್ತಿದೆ. ಅರ್ಧಕ್ಕೆ ನಿಲ್ಲಿಸಿದರೆ ಜನರಿಂದ ಆರೋಪದ ಮಾತು ಕೇಳಿಬರುತ್ತದೆ ಕೆಲಸ ಮಾಡಿಸದಿದ್ದರೆ ಬಂದ ಅನುದಾನವೂ ವಾಪಸ್ ಹೋಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಕೆ.ಎಸ್. ಬೇಸರ ವ್ಯಕ್ತಪಡಿಸಿದರು.
‘ಕೆ.ಕೆ. ರಸ್ತೆಯಿಂದ ಮುತ್ತಮ್ಮನ ಹೊಲದವರೆಗೆ ಕಾಂಕ್ರೀಟ್ (ಸಿಸಿ) ರಸ್ತೆ ನಿರ್ಮಾಣವಾಗಿದೆ. ಆದರೆ, ಅಲ್ಲಿಂದ ದಣ್ಣೇಶ್ ತಿಮ್ಮೇಶ್ ಮನೆಯವರೆಗಿನ 100 ಮೀಟರ್ ರಸ್ತೆಯು ಅಭಿವೃದ್ಧಿಯಾಗಿಲ್ಲ. ಈ ರಸ್ತೆಗೆ ಮೂರು ಬಾರಿ ಮಣ್ಣು ಹಾಕಿದರೂ, ಹದಗೆಟ್ಟಿದೆ. ಈ ಮಾರ್ಗದಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ರೈತರು ಬೈಕ್‌ನಿಂದ ಬಿದ್ದು ಕಾಲು ಮುರಿದುಕೊಂಡಿರುವ ಘಟನೆಗಳು ನಡೆದಿವೆ’ ಎಂದರು.
‘ಕೆ.ಕೆ. ರಸ್ತೆಯಿಂದ ರೇಂಜರ್ ಮನೆವರೆಗೆ ಸಾಗುವ ರಸ್ತೆ, ಕುಳಗಟ್ಟೆಯಿಂದ ಹನುಮನಹಳ್ಳಿವರೆಗಿನ ರಸ್ತೆ, ಕುಳಗಟ್ಟೆ ಗ್ರಾಮದ ಸಂಗನಹಳ್ಳಿಯ ದೊಡ್ಡೇಶಪ್ಪನ ಕೇರಿ ರಸ್ತೆ ಹಾಗೂ ಕೆಮ್ಮಣ್ಣುಗುಂಡಿ ರಸ್ತೆಗಳು ಹದಗೆಟ್ಟಿವೆ’ ಎಂದು ಎಂ.ಆರ್ ಹನುಮಂತಪ್ಪ ಹೇಳಿದರು.
‘ಕುಳಗಟ್ಟೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವುದರಿಂದ ಹನುಮನಹಳ್ಳಿಯ ಜನರು ನಿತ್ಯ ಇಲ್ಲಿಗೆ ಬರುತ್ತಾರೆ. ಆದರೆ, ಕುಳಗಟ್ಟೆಯಿಂದ ಹನುಮನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ದೊಡ್ಡ ಗುಂಡಿಗಳಿಂದ ಕೂಡಿದೆ. ಈ ರಸ್ತೆ ಅಭಿವೃದ್ಧಿಗಾಗಿ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ’ ಎಂದು ಹನುಮನಹಳ್ಳಿಯ ಲಲಿತಮ್ಮ, ಶಾಂತಮ್ಮ ಮತ್ತು ರುದ್ರನಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.