ದಾವಣಗೆರೆ: ಹೃದಯವಂತಿಕೆ ಇಲ್ಲದ ವ್ಯಕ್ತಿಯಲ್ಲಿ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯ ಶ್ರೀಮಂತಿಕೆ ಮುಖ್ಯ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಶ್ರೀಮದ್ವೀರಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಆಷಾಢ ಮಾಸದ ಇಷ್ಟಲಿಂಗ ಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಮಾನವನ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಮುಖ್ಯ. ಇಹಪರದ ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ, ಸಂತಸದ ಬಾಳಿಗೆ ಧರ್ಮವೊಂದೇ ಆಶಾಕಿರಣ. ಬದುಕು ವಿಕಾಸಗೊಳ್ಳಲು ಆಧ್ಯಾತ್ಮದ ಅರಿವು ಬೇಕು. ನಡೆ– ನುಡಿ ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಆಧ್ಯಾತ್ಮ’ ಎಂದು ಹೇಳಿದರು.
‘ಪಂಚಪೀಠದ ಮಠಾಧೀಶರನ್ನು ಒಂದೇ ವೇದಿಕೆಗೆ ತರುವಲ್ಲಿ ರಂಭಾಪುರಿ ಶ್ರೀ ಶ್ರಮ ಹೆಚ್ಚಿದೆ. ಇದೊಂದು ಕ್ರಾಂತಿಕಾರಕ ಬದಲಾವಣೆಯೇ ಸರಿ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಒಳಪಂಗಡ ಮನೋಭಾವ ಮೂಡಿದರೆ ಸಮುದಾಯದಲ್ಲಿ ಒಗ್ಗಟ್ಟು ಉಳಿಯಲು ಸಾಧ್ಯವಿಲ್ಲ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ ಕಳವಳ ವ್ಯಕ್ತಪಡಿಸಿದರು.
‘ಮಠಗಳು ಸಾವಿರಾರು ವರ್ಷಗಳಿಂದ ಅನ್ನ ಮತ್ತು ಜ್ಞಾನ ದಾಸೋಹ ನೀಡುತ್ತಿವೆ. ಪ್ರತಿಯೊಬ್ಬರ ಬದುಕಿಗೆ ಶಿಕ್ಷಣ ಮತ್ತು ಸಂಸ್ಕಾರ ಬೇಕು. ದೇಹ ಮತ್ತು ಮಾನಸಿಕ ಆರೋಗ್ಯವೂ ಮುಖ್ಯ. ಮಠಾಧೀಶರ ಮಾರ್ಗದಲ್ಲಿ ಸಮುದಾಯ ನಡೆಯಬೇಕು. ಗುರುಗಳ ಜೊತಗೆ ಹೆಜ್ಜೆ ಹಾಕಬೇಕು’ ಎಂದು ಹೇಳಿದರು.
ಡಾ.ಜಿ.ಯಶವಂತ ಅವರಿಗೆ ‘ವೈದ್ಯ ಚಿಂತಾಮಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ಸಮುದಾಯದ ಮುಖಂಡರಾದ ಡಿ.ಡಿ. ಬಸವರಾಜಪ್ಪ, ರಾಜಶೇಖರ ಅಣ್ಣಿಗೇರಿ, ಗೌತಮ್ ಜೈನ್, ಖಂಡೋಜಿರಾವ್ ಜಾಧವ್, ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಹಾಜರಿದ್ದರು.
‘ಒಗ್ಗಟ್ಟು ಐತಿಹಾಸಿಕ’ ‘ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಜುಲೈ 21 ಮತ್ತು 22ರಂದು ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದು ಪಂಚಪೀಠದ ಮಠಾಧೀಶರು ಒಂದೇ ವೇದಿಕೆಗೆ ಬರುತ್ತಿರುವುದು ಐತಿಹಾಸಿಕ ನಡೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ ಅಭಿಪ್ರಾಯಪಟ್ಟರು. ‘ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸಚಿವ ವಿ. ಸೋಮಣ್ಣ ಅರಣ್ಯ ಸಚಿವ ಈಶ್ವರ ಖಂಡ್ರೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸಂಸದರಾದ ಜಗದೀಶ ಶೆಟ್ಟರ್ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.