
ಧಾರವಾಡ: ‘ನಗರ ಪ್ರದೇಶದಲ್ಲಿ ಹಲವಡೆ ಜಾಗದ ಸಮಸ್ಯೆಯಿದ್ದು, ಉದ್ಯಾನದೊಳಗೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಾನಗರ ಪಾಲಿಕೆಗೆ ಮನವಿಪತ್ರ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಮಾತನಾಡಿದ ಅವರು, ‘ಜಾಗದ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದರು.
‘ಉದ್ಯಾನದಲ್ಲಿ ಶೇ 5ರಷ್ಟು ಜಾಗವನ್ನು ನಾಗರಿಕ ಸೌಲಭ್ಯಗಳ ಬಳಕೆಗೆ ಅವಕಾಶ ಇದೆ. ಕಲಬುರ್ಗಿ ಪಾಲಿಕೆಯು ಉದ್ಯಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದಿಸಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯವರು ಆ ಕ್ರಮ ಅನುಸರಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ತಿಳಿಸಿದರು.
‘ಜಿಲ್ಲೆಯಲ್ಲಿ 1622 ಅಂಗನವಾಡಿಗಳು ಇವೆ. 834 ಸ್ವಂತ ಕಟ್ಟಡ, 331 ಸರ್ಕಾರದ ಇತರ ಕಟ್ದಡ ಮತ್ತು 457 ಬಾಡಿಗೆ ಕಟ್ಟಡದಲ್ಲಿವೆ. ನಗರ ಪ್ರದೇಶದಲ್ಲಿ 300 ಅಂಗನವಾಡಿ ಕಟ್ಟಡಕ್ಕೆ ನಿವೇಶನ ಇಲ್ಲ. ಒಂದು ಕಡೆ ಉದ್ಯಾನದಲ್ಲಿ ಜಾಗ ಒದಗಿಸಲು ಪಾಲಿಕೆಗೆ ಮನವಿ ಸಲ್ಲಿಸಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಎಚ್.ಎಚ್.ಕುಕನೂರ ತಿಳಿಸಿದರು.
‘ಉದ್ಯಾನದ ಶೇ 5 ರಷ್ಟು ಸಿ.ಎ ಜಾಗದಲ್ಲಿ ಪುನಶ್ಚೇತನ ಪ್ರದೇಶ ಎಂದು ಗುರುತಿಸಿ ಅಂನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ಒದಗಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ತಿಳಿಸಿದರು.
‘ಬಿಆರ್‌ಟಿಎಸ್ ಸ್ವಚ್ಛತೆ ಕಾಪಾಡಿ’: ಬಿಆರ್‌ಟಿಎಸ್ ಮಾರ್ಗ ಮತ್ತು ನಿಲ್ದಾಣಗಳಲ್ಲಿ ಸ್ವಚ್ಛತೆ ಸಮಸ್ಯೆ ಇದೆ ಎಂದು ಶಾಸಕ ಕೋನರೆಡ್ಡಿ ತಿಳಿಸಿದರು.
‘ಪಾಲಿಕೆಯವರ ಸಹಕಾರ ಪಡೆದು ಬಿಆರ್‌ಟಿಎಸ್ ಮಾರ್ಗ ಮತ್ತು ನಿಲ್ದಾಣಗಳ ಸ್ವಚ್ಛತೆಗೆ ಕ್ರಮ ವಹಿಸಬೇಕು. ಮುತುವರ್ಜಿ ಅವರು ತ್ವರಿತವಾಗಿ ಈ ಕಾರ್ಯ ಮಾಡಬೇಕು ಎಂದು ಬಿಆರ್‌ಟಿಎಸ್ ಅಧಿಕಾರಿ ಸಂತೋಷ್ ಅವರಿಗೆ ಲಾಡ್ ಸೂಚನೆ ನೀಡಿದರು.
‘ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾರಿ ಶೇ 52ರಷ್ಟು ಆಗಿದೆ. ಹೊಸೂರು ವೃತ್ತ, ಗದಗ ಮಾರ್ಗ ಭಾಗದಲ್ಲಿ ಕಾಮಗಾರಿ ಬಾಕಿ ಇದೆ. ಚನ್ನಮ್ಮ ವೃತ್ತದ ಕಾಮಗಾರಿಯನ್ನು ಮಾರ್ಚ್ 31ರೊಳಗೆ ಮುಗಿಸುವ ಗುರಿ ಇದೆ’ ಎಂದು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) ವಿಭಾಗದ ಅಧಿಕಾರಿ ತಿಳಿಸಿದರು.
'ನರೇಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳು ಎತ್ತುವ ಕಾಮಗಾರಿ ಪರಿಶೀಲಿಸಿದ್ದೇನೆ' ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತೊದಗಲಬಾಗಿ ತಿಳಿಸಿದರು.
‘ಮಳೆಯಾಗುತ್ತಿದೆ, ಕೆರೆಗಳಲ್ಲಿ ಹೂಳು ಎತ್ತುವ ಕಾಮಗಾರಿ ಈಗ ನಡೆಸಲು ಸಾಧ್ಯವಿಲ್ಲ. ಸುಮ್ಮನೆ ಏನೇನೊ ಹೇಳಬೇಡಿ’ ಎಂದು ಸಚಿವ ಲಾಡ್ ಆ ಅಧಿಕಾರಿ ವಿರುದ್ಧ ಗರಂ ಆದರು.
‘ಈರುಳ್ಳಿ ಬೆಲೆ ಕುಸಿದಿದೆ. ಬೆಳೆಗಾರರು ಸಂಕಷ್ಟದಲ್ಲಿದ್ದಾರೆ‘ ಎಂದು ಶಾಸಕ ಕೋನರೆಡ್ಡಿ ಹೇಳಿದರು.
ಈರುಳ್ಳಿ ಖರೀದಿ ಕೇಂದ್ರ ಆರಂಭಿಸಲು ಅವಕಾಶ ಇದೆಯೇ ಎಂದು ಪರಿಶೀಲಿಸಿ ಕ್ರಮವವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಲಾಡ್ ಸೂಚನೆ ನೀಡಿದರು.
ಅಣ್ಣಿಗೇರಿ ತಾಲ್ಲೂಕಿನ ನಾವಳ್ಳಿ, ಕುರಹಟ್ಟಿ ಸಮೀಪದ ಹಂದಿಗನಹಳ್ಳ ಪ್ರದೇಶದಲ್ಲಿ ತೋಟಗಾರಿಕೆ ಮಿಷನ್ ಕಾರ್ಯಕ್ರಮದಡಿ ರೈತರಿಗೆ ಪ್ರೋತ್ಸಾಹ ನೀಡಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ ತಿಳಿಸಿದರು.
‘ನರೇಗಾ ಯೋಜನೆಯಡಿ ಹಳ್ಳದ ಬದಿ ಪ್ರದೇಶದಲ್ಲಿ ಪ್ಲಾಂಟೆಷನ್ ಮಾಡಿಸಲು ಕ್ರಮ ವಹಿಸಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಪ್ರದೀಪ ಶೆಟ್ಟರ, ಸಲೀಂ ಅಹಮದ್ ಉಪಸ್ಥಿತರಿದ್ದರು.
ಜಿಲ್ಲೆಗೆ ಬೆಳೆ ಪರಿಹಾರಕ್ಕೆ ಸರ್ಕಾರ ₹ 63 ಕೋಟಿ ಬಿಡುಗಡೆ ಮಾಡಿದೆ. ಮಳೆ ಆಶ್ರಿತ ಜಮೀನಿಗೆ ಹೆಕ್ಟೇರ್‌ಗೆ ₹ 8.5 ಸಾವಿರ ನೀರಾವರಿ ಜಮೀನಿಗೆ ₹ 17 ಸಾವಿರ ಪರಿಹಾರವಿದೆ. 14 ಕೋಟಿ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ. ಶೀಘ್ರವೇ ಎಲ್ಲರಿಗೂ ಸಿಗಲಿದೆ.ಸಂತೋಷ ಲಾಡ್ ಸಚಿವ
‘ಎಲ್&ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ’
ನೀರಿನ ಯೋಜನೆ ಕಾಮಗಾರಿ ತ್ವರಿತವಾಗಿ ಮುಗಿಸಲು ಎಲ್ & ಟಿ ಕಂಪನಿಯವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅವರು ಅಕ್ರಮ ವಹಿಸಿಲ್ಲ. ಕಾನೂನು ಪರಿಣತರ ಸಲಹೆ ಪಡೆದು ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಸಚಿವ್ ಲಾಡ್ ನಿರ್ದೇಶನ ನೀಡಿದರು. ‘ಸವದತ್ತಿ ಜಾಕ್‌ವೆಲ್ ನಿಂದ ಅಮ್ಮಿನಭಾವಿ ಜಲ ಸಂಗ್ರಹಾಗಾರಕ್ಕೆ ನೀರು ಪೂರೈಕೆ ಕಾಮಗಾರಿ ನವೆಂಬರ್ ಅಂತ್ಯದೊತ್ತಿಗೆ ಮುಗಿಯಲಿದೆ. ಜನವರಿ ಹೊತ್ತಿಗೆ ನಗರಕ್ಕೆ ನೀರು ಸರಬರಾಜಿಗೆ ಕ್ರಮ ವಹಿಸಬಹುದು. ಇದು ಕಾರ್ಯಗತವಾಗದರೆ ಈಗ ಎಂಟು ದಿನಗಳಿಗೆ ನೀರು ಪೂರೈಸುವ ಪ್ರದೇಶಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಬಹುದು’ ಎಂದು ಎಲ್&ಟಿ ಕಂಪನಿ ನೌಕರ ಸಭೆಗೆ ತಿಳಿಸಿದರು.
ಶಾಲೆ: ಹೊಸ ಕಟ್ಟಡ ಶೌಚಾಲಯ ನಿರ್ಮಾಣ ನಿಗಾಕ್ಕೆ ಸೂಚನೆ
ಶಿಥಿಲಾವಸ್ಥೆಯಲ್ಲಿರುವ ಶಾಲಾಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಏಜೆನ್ಸಿಗೆ ನೀಡಬೇಕು. ಹೊಸ ಕಟ್ಟಡ ಮತ್ತು ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಮೇಲುಸ್ತುವಾರಿ ಮಾಡಬೇಕು ಎಂದು ಲಾಡ್ ಸೂಚನೆ ನೀಡಿದರು. ಜಿಲ್ಲೆಯಲ್ಲಿ 135 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಡಿಡಿಪಿಐ ಎಸ್.ಎಸ್.ಕೆಳದಿಮಠ ತಿಳಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ದಾಖಲಿಸಿರುವ ಶಾಲೆಗಳ ಶಿಕ್ಷಕರೊಂದಿಗೆ ಸಭೆ ನಡೆಸುತ್ತೇನೆ ಎಂದು ಲಾಡ್ ತಿಳಿಸಿದರು. ‘22 ಶಾಲೆಗಳಲ್ಲಿ ಶೌಚಾಲಯ ಇಲ್ಲ’: ‘ಕುಂದಗೋಳ ಕ್ಷೇತ್ರದ 22 ಶಾಲೆಗಳಲ್ಲಿ ಶೌಚಾಲಯ ಇಲ್ಲ’ ಎಂದು ಶಾಸಕ ಎಂ.ಆರ್.ಪಾಟೀಲ ತಿಳಿಸಿದರು ವಿದ್ಯಾರ್ಥಿಗಳಿಗೆ ಶೂ ವಿತರಿಸಿಲ್ಲ: ಶಾಲೆ ಆರಂಭವಾಗಿ ಅರ್ಧ ವರ್ಷ ಕೆಳದರೂ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ವಿತರಣೆ ಮಾಡಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಪರಿಶೀಲಿಸಿ ಕ್ರಮ ವಹಿಸುವಂತೆ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿಗೆ ಲಾಡ್ ಸೂಚನೆ ನೀಡಿದರು.
‘ಎಂಎಸ್‌ಪಿ: ನೋಂದಣಿ ಖರೀದಿಗೆ ಬಯೋಮೆಟ್ರಿಕ್ ವ್ಯವಸ್ಥೆ–ಸಮಸ್ಯೆ‘
‘ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ನೋಂದಣಿ ಮತ್ತು ಖರೀದಿ ಎರಡಕ್ಕೂ ಬಯೋಮೆಟ್ರಿಕ್ ಕಡ್ಡಾಯ ಮಾಡಲಾಗಿದೆ. ಈ ಬಾರಿ ಗೋಣಿಚೀಲಗಳಿಗೆ ‘ಕ್ಯುಆರ್ ಕೋಡ್’ ವ್ಯವಸ್ಥೆ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ‘ನೋಂದಣಿ ನಿಟ್ಟಿನಲ್ಲಿ ಕೆಲವೆಡೆ ರೈತರು ಬೆಳಿಗ್ಗೆ 4 ಗಂಟೆಗೆ ಸರದಿಯಲ್ಲಿ ನಿಲ್ಲುವಂತಾಗಿದೆ. ಕೇಂದ್ರದಲ್ಲಿ ನೋಂದಣಿಗೆ ಎರಡು ಘಟಕ ವ್ಯವಸ್ಥೆ ಮಾಡಿದರೆ ಒಳ್ಳೆಯದು‘ ಎಂದು ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.