
ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳ ಆಗ್ರಹ ಸಮಾವೇಶದಲ್ಲಿ ಸಂತೋಷ ಹಗ್ಡೆ ಮಾತನಾಡಿದರು
ಪ್ರಜಾವಾಣಿ ಚಿತ್ರ
ಧಾರವಾಡ: ‘ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ, ಆದರೆ ಸರ್ಕಾರ ಭರ್ತಿ ಮಾಡುತ್ತಿಲ್ಲ. ಹುದ್ದೆಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆಯದಕ್ಕೆ ಬಳಸಲಾಗುತ್ತಿದೆ, ಇದು ಯಾವ ರಾಜನೀತಿ?’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶ್ನಿಸಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳ ಆಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಸರ್ಕಾರಿ ಹುದ್ದೆಗಳು ಎಷ್ಟು ಖಾಲಿ ಇವೆ, ಹೊಸದಾಗಿ ಎಷ್ಟು ಹುದ್ದೆ ಸೃಜಿಸಲಾಗಿದೆ, ಎಷ್ಟು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂಬ ವಿವರವನ್ನು ಪ್ರತಿವರ್ಷ ಸರ್ಕಾರವು ಸಾರ್ವಜನಿಕರಿಗೆ ತಿಳಿಸಬೇಕು. ಹುದ್ದೆಗಳ ಭರ್ತಿಗೆ ಹಣಕಾಸು ಇಲ್ಲ ಎಂದು ಸರ್ಕಾರ ಹೇಳುತ್ತದೆ. ಹಾಗಾದರೆ, ಅದಕ್ಕೆ ಮೀಸಲಿಟ್ಟ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರಿ ಸಂಸ್ಥೆಗಳಿಗೆ ಬೇಕಾಗುವ ಹುದ್ದೆಗಳು ಮತ್ತು ಅನುದಾನಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗದಿಂದ ಮಾಹಿತಿ ಪಡೆದು ನೇಮಕಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಉದ್ಯೋಗಾರ್ಥಿಗಳನ್ನು ನಿರಾಸೆಗೊಳಿಸುವುದು ಸರಿಯಲ್ಲ. ಉದ್ಯೋಗಾರ್ಥಿಗಳ ಬಗ್ಗೆ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸರ್ಕಾರಕ್ಕೆ ತಿಳಿವಳಿಕೆ ಬರುವಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಮಾತ್ರವಲ್ಲ, ಕಳೆದ 79 ವರ್ಷಗಳಲ್ಲಿ ಎಷ್ಟು ಹುದ್ದೆಗಳು ಜಾಸ್ತಿಯಾಗಬೇಕಿತ್ತು ಎಂದು ಕೇಳಬೇಕು’ ಎಂದರು.
’ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರತಿನಿಧಿಗಳು ಈಚೆಗೆ ಸಂಬಳವನ್ನು ಶೇ 100 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ನೀಡುತ್ತಾರೆ. ನಂತರ, ಇಷ್ಟ ಬಂದಂತೆ ಆಡಳಿತ ನಡೆಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
’ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವ ನಿಮ್ಮ ಪ್ರಯತ್ನದಲ್ಲಿ ಜತೆ ಇರುತ್ತೇನೆ’ ಎಂದರು.
ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ’ಯೋಚನೆ ಮಾಡದೆ ಮಾಡುವ ಹೋರಾಟ ಅಪಾಯಕಾರಿ. ಹೋರಾಟ ಯೋಜನಾಬದ್ಧವಾಗಿ ಮತ್ತು ವ್ಯವಸ್ಥಿತವಾಗಿರಬೇಕು’ ಎಂದರು.
‘ಹೋರಾಟಗಾರರು ನೈತಿಕತೆ ರೂಢಿಸಿಕೊಳ್ಳಬೇಕು. ಸಾಮೂಹಿಕ ನಿರ್ಧಾರ ಮತ್ತು ಕ್ರಿಯೆಗಳಿಂದ ಹೋರಾಟ ಮುಂದುವರಿಸಬಹುದು. ಹೋರಾಟ ಬೆಳೆಸಲು ಹೊಸ ಮಾದರಿ ಸೃಷ್ಟಿಸಬೇಕು’ ಎಂದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲು ಸಮಾವೇಶದಲ್ಲಿ ನಿರ್ಧರಿಸಲಾಯಿತು.
ಹೋರಾಟ ಸಮಿತಿಯ ಕಾರ್ಯದರ್ಶಿ ಚೆನ್ನಬಸವ ಜಾನೇಕಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸಲಹೆಗಾರ ಜಿ. ಎಸ್.ಕುಮಾರ್, ಮುಖಂಡರಾದ ಸಿದ್ದಲಿಂಗ ಬಾಗೇವಾಡಿ, ಭವಾನಿಶಂಕರ ಗೌಡ, ವೀರೇಶ್ ನರೇಗಲ್ ಉಪಸ್ಥಿತರಿದ್ದರು.
‘ಅಹಿಂಸೆ ಸತ್ಯ ನ್ಯಾಯ ಮಾರ್ಗ ಅನುಸರಿಸಿ’
‘ಅಹಿಂಸೆ ಸತ್ಯ ಮತ್ತು ನ್ಯಾಯ ಮಾರ್ಗ ನಮಗೆ ದಾರಿದೀಪವಾಗಬೇಕು. ನ್ಯಾಯಬದ್ಧವಾಗಿ ಜವಾಬ್ದಾರಿಯಿಂದ ಆದರ್ಶಗಳಿಂದ ಪ್ರೇರಿತರಾಗಿ ಹೋರಾಟ ಮಾಡಿದರೆ ಯಶಸ್ವಿಯಾಗಬಹುದು ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು. ‘ಗಾಂಧೀಜಿ. ಅಂಬೇಡ್ಕರ್ ಅವರಂಥ ಮಹನೀಯರ ಮಾರ್ಗಗಳನ್ನು ಅನುಸರಿಸಬೆಕು. ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕು. ಪ್ರಜಾಪ್ರಭುತ್ವ ಉಳಿಸಬೇಕು. ಅರ್ಥಪೂರ್ಣ ಜೀವನೋಪಾಯ ನಮ್ಮ ಗುರಿಯಾಗಿರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.