
ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರದ ಸೌಂದರ್ಯ ಹಾಗೂ ಅಶುಚಿತ್ವಕ್ಕೆ ಕಾರಣವಾಗಿರುವ 622 ಬ್ಲ್ಯಾಕ್ ಸ್ಪಾಟ್‌ಗಳನ್ನು ಪಾಲಿಕೆ ಗುರುತಿಸಿದೆ. ಈ ಸ್ಥಳಗಳಲ್ಲಿ ಕಸ ಚೆಲ್ಲುವವರನ್ನು ಪತ್ತೆಹಚ್ಚಿ, ದಂಡ ಹಾಕುವ ಪ್ರಕ್ರಿಯೆಗೆ ಅಧಿಕಾರಿಗಳು ಮುಂದಾಗಬೇಕು’ ಎಂದು ಸಚಿವ ಸಂತೋಷ ಲಾಡ್ ಸೂಚಿಸಿದರು.
ಮಹಾನಗರ ಪಾಲಿಕೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಗರದ ಬಹುತೇಕ ಕಡೆ ಬಾಟಲ್ ನೆಕ್ ಮಾದರಿಯಲ್ಲಿ ಗಟಾರುಗಳು ನಿರ್ಮಾಣವಾಗಿವೆ. ಯೋಜನಾಬದ್ಧವಾಗಿ ನಗರ ನಿರ್ಮಾಣವಾಗದ ಕಾರಣ ಮಳೆ ಬಂದಾಗ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತವೆ. ಸಮಸ್ಯೆ ಸೃಷ್ಟಿಯಾಗುವ ಸ್ಥಳಗಳಲ್ಲಿ ಸಾರ್ವಜನಿಕರು ಕಸ ಚೆಲ್ಲುವುದರಿಂದ, ಮಳೆ ಬಂದ ಸಂದರ್ಭ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಸಾರ್ವಜನಿಕರು ತಮ್ಮ ಜವಾಬ್ದಾರಿ ತಿಳಿದುಕೊಳ್ಳಬೇಕು’ ಎಂದರು.
‘ಕ್ಷೇತ್ರದ ಸಮಸ್ಯೆ ತಿಳಿಯುವಲ್ಲಿ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿ–ಅಂಶಗಳ ಮಾಹಿತಿ ನೀಡುವ ಅಧಿಕಾರಿಗಳು, ತಮ್ಮ ಕರ್ತವ್ಯವನ್ನು ಸಮರ್ಥವಾಗಿ ಹಾಗೂ ಕಾಲಮಿತಿಯಲ್ಲಿ ನಿರ್ವಹಿಸುತ್ತಿಲ್ಲ. ಪ್ರತಿದಿನ ಬೆಳಿಗ್ಗೆ ಕನಿಷ್ಠ ಎರಡು ತಾಸು ಆಯುಕ್ತರಾದಿಯಾಗಿ ಎಲ್ಲ ಅಧಿಕಾರಿ, ಸಿಬ್ಬಂದಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸ್ವಚ್ಛತೆ, ಸಮಸ್ಯೆ ಹಾಗೂ ಕಾಮಗಾರಿಗಳನ್ನು ಪರಿಶೀಲಿಸಬೇಕು. ಕ್ಷೇತ್ರ ಭೇಟಿಯ ನಿಖರತೆ ತಿಳಿಯಲು ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು’ ಎಂದು ಹೇಳಿದರು.
‘ಅಧಿಕಾರಿಗಳು ಕಾರು, ಕಚೇರಿಯಲ್ಲಿ ಕಾಲ ಕಳೆಯದೆ, ಕ್ಷೇತ್ರ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ತಮ್ಮ ವ್ಯಾಪ್ತಿಯ ಪ್ರದೇಶ ಹಾಗೂ ಸಮಸ್ಯೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿರಬೇಕು’ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಮತ್ತು ಪೌರಕಾರ್ಮಿಕರು ಸೇರಿ 100 ಮಂದಿಯ ತಂಡ ರಚಿಸಿ, ಪ್ರತಿವಾರ ಒಂದೊಂದು ವಾರ್ಡ್ ಶುಚಿಗೊಳಿಸಬೇಕು. ಮಳೆಗಾಲ ಆರಂಭವಾಗಿರುವುದರಿಂದ ಆರೋಗ್ಯ ನಿರೀಕ್ಷಕರು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು’ ಎಂದರು.
ಮೇಯರ್ ರಾಮಪ್ಪ ಬಡಿಗೇರ, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಡಿಸಿಪಿ ಮಹಾನಿಂಗ ನಂದಗಾವಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಡಾ ಆಯುಕ್ತ ಸಂತೋಷ ಬಿರಾದಾರ ಹಾಗೂ ನಾಗರಾಜ ಗೌರಿ, ರಾಜಣ್ಣ ಕೊರವಿ, ಸುವರ್ಣಾ ಕಲಕುಂಟ್ಲಾ ಇತರರು ಪಾಲ್ಗೊಂಡಿದ್ದರು.
ತುರ್ತು ಕಾಮಗಾರಿ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ. ಎಲ್ಲ ಶಾಸಕರ ಜೊತೆ ಸಭೆ ನಡೆಸಿ ನಗರ ಸ್ವಚ್ಛತೆಗಾಗಿ ವಿಶೇಷ ಅಭಿಯಾನ ರೂಪಿಸಲಾಗುವುದುದಿವ್ಯಪ್ರಭು ಜಿಲ್ಲಾಧಿಕಾರಿ
ಸಿಬ್ಬಂದಿ ಕೊರತೆ ನಡುವೆಯೂ ಸಾರ್ವಜನಿಕ ದೂರುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಿ ಪರಿಹಾರ ನೀಡಲಾಗುತ್ತಿದೆ. ಜನಪ್ರತಿನಿಧಿಗಳ ನಿರ್ದೇಶನ ಪಾಲಿಸಲಾಗುವುದುರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
‘ಖಾಲಿ ನಿವೇಶನ ವಶಕ್ಕೆ ಪಡೆಯಿರಿ’
‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 82 ಸಾವಿರ ಖಾಲಿ ನಿವೇಶನಗಳಿದ್ದು ಒಂದು ವಾರದ ಒಳಗೆ ಸ್ವಚ್ಛತೆ ಮಾಡಿಕೊಳ್ಳಲು ಮಾಲೀಕರಿಗೆ ನಿರ್ದೇಶಿಸಬೇಕು. ಇಲ್ಲದಿದ್ದರೆ ದಂಡ ಹಾಕಬೇಕು. ಆಗಲೂ ಸುಧಾರಿಸದಿದ್ದರೆ ನಿವೇಶನ ವಶಕ್ಕೆ ಪಡೆಯಲು ಮುಂದಾಗಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಸಚಿವ ಸಂತೊಷ ಲಾಡ್ ಸೂಚಿಸಿದರು. ‘ಬಹುತೇಕ ನಿವೇಶನಗಳಿಗೆ ಕಾಂಪೌಂಡ್ ಇಲ್ಲ ಗಿಡಗಂಟಿ ಬೆಳೆದು ನಿಂತಿವೆ. ಅಕ್ಕಪಕ್ಕದ ಮನೆಯವರು ಕಸ ತಂದು ಚೆಲ್ಲುತ್ತಾರೆ. ವಿಷ ಜಂತುಗಳು ಹಂದಿಗಳು ವಾಸಿಸುವ ತಾಣವಾಗಿದೆ. ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದರು. ‘ನಗರದ ಸ್ವಚ್ಛತೆಗೆ ನಾಗರಿಕರ ಪರಿಸರವಾದಿಗಳ ಸರ್ಕಾರೇತರ ಸಂಸ್ಥೆಗಳ ಸಹಕಾರ ಮುಖ್ಯ. ರಜಾದಿನ ಹಾಗೂ ಭಾನುವಾರದಂದು ಎನ್‌ಎಸ್‌ಎಸ್ ಹಾಗೂ ಇತರ ಸ್ವಯಂ ಸೇವಾ ಸಂಘಟನೆಗಳ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು’ ಎಂದರು.
ಅಧಿಕಾರಿಗಳ ತರಾಟೆ
ಗಣೇಶನಗರ ಮೊದಲ ಹಾಗೂ ಎರಡನೇ ಕ್ರಾಸ್‌ನಲ್ಲಿ ಹೂಳು ತುಂಬಿದ ಗಟಾರು ಮುಚ್ಚದ ಮ್ಯಾನ್ ಹೋಲ್ ಹಾಗೂ ಖಾಲಿ ನಿವೇಶನದಲ್ಲಿ ಕಸದ ರಾಶಿ ಇರುವುದನ್ನು ಗಮನಿಸಿದ ಸಚಿವ ಲಾಡ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಆತ್ಮಸಾಕ್ಷಿಯಿಂದ ಕೆಲಸ ಮಾಡುವಂತೆ ಹೇಳಿ ಕ್ಷೇತ್ರ ಭೇಟಿಗೆ ಸೂಚಿಸಿದರು. ಆನಂದನಗರ ವೃತ್ತ ಗಾಂಧಿವಾಡ ಆರೂಢನಗರ ರಾಮಲಿಂಗೇಶ್ವರ ನಗರ ಕೇಶ್ವಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಿದ್ದಿದ್ದ ಕಸ ತೆರವುಗೊಳಿಸಲು ಪೌರಕಾರ್ಮಿಕರ ಜೊತೆ ಕೈ ಜೋಡಿಸಿದರು. ವಿವಿಧ ಬಡಾವಣೆಗಳ ಸಾರ್ವಜನಿಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.