
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡ ವಾರ್ಡ್ ನಂ.30ರ ತೋಳನಕೆರೆ ಉದ್ಯಾನ ಸಮರ್ಪಕ ನಿರ್ವಹಣೆ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ.
ಸುಮಾರು 32.64 ಎಕರೆಯಲ್ಲಿ ತೋಳನಕೆರೆ ಉದ್ಯಾನ ಇದ್ದು, ₹20.51 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ಸುರಿದರೂ ಉದ್ಯಾನ ಕಳೆಗುಂದಿದೆ. ಉದ್ಯಾನಕ್ಕೆ ಕಾಲಿಟ್ಟರೆ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.
ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಗುಟ್ಕಾ, ಕುರುಕಲು ತಿಂಡಿ ತಿಂದು ಬಿಸಾಕಿದ ಹಾಳೆಗಳು, ಮಕ್ಕಳ ಆಟಿಕೆ ಸಾಮಗ್ರಿಗಳು ಹಾಳಾಗಿದ್ದು, ಮಕ್ಕಳ ಆಟಕ್ಕೆ ಉಪಯೋಗಕ್ಕೆ ಬಾರದಂತಾಗಿವೆ. ಅಷ್ಟೆ ಅಲ್ಲದೆ ಜಿಮ್ ಮಾಡುವವರಿಗೆ ಅನುಕೂಲವಾಗಲೆಂದು ಅಳವಡಿಸಿರುವ ಜಿಮ್ ಪರಿಕರಗಳು ಸಹ ಹಾಳಾಗಿದ್ದು, ವ್ಯಾಯಾಮ ಮಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಜಿಮ್ ಪರಿಕರಗಳು ಮುರಿದು ಬಿದ್ದಿವೆ.
ಉದ್ಯಾನಕ್ಕಿಂತ ಅವ್ಯವಸ್ಥೆಯ ತಾಣವಾಗಿ ಗೋಚರಿಸುತ್ತದೆ. ವಿಶ್ರಾಂತಿ, ವಾಯುವಿಹಾರಕ್ಕೆ ಬರುವವರಿಗೆ ಇದು ಅಸಹನೀಯವಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವವರು ಕಿರಿಕಿರಿ ಅನುಭವಿಸುವಂತಾಗಿದೆ. ಫುಟ್‌ಪಾತ್ ಮೇಲಿನ ಕಲ್ಲಗಳು ಕಿತ್ತಿದ್ದು, ಓಡಾಡಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಫಿಲ್ಟರ್ ವಾಟರ್ ಕೆಟ್ಟುನಿಂತು ತಿಂಗಳುಗಳೇ ಕಳೆದರೂ ದುರಸ್ತಿ ಕಾರ್ಯ ಮಾತ್ರ ಮಾಡಿಲ್ಲ. ತೊಳನಕೆರೆಗೆ ಬರುವವರು ನೀರಿಗಾಗಿ ಪರದಾಡುವಂತಾಗಿದೆ.
ತೋಳನಕೆರೆಯಲ್ಲಿ ಬೆಳಿಗ್ಗೆ 6ರಿಂದ 8.30ರ ವರೆಗೆ ವಾಯುವಿಹಾರಕ್ಕೆ ಮಾತ್ರ ಉಚಿತ ಪ್ರವೇಶವಿದೆ. ಉಳಿದಂತೆ ಬೆಳಿಗ್ಗೆ 10.30ರಿಂದ ಸಂಜೆ 7ರ ವರೆಗೆ ಪ್ರವೇಶಕ್ಕೆ ದೊಡ್ಡವರಿಗೆ ₹20 ಮತ್ತು ಮಕ್ಕಳಿಗೆ ₹15 ಶುಲ್ಕ ವಿಧಿಸಲಾಗಿದೆ. ದುಡ್ಡು ಕೊಟ್ಟು ಮಕ್ಕಳನ್ನು ಆಟ ಆಡಿಸಲು ಕರೆದುಕೊಂಡು ಬರುವ ಪೋಷಕರಿಗೆ ಆಟಿಕೆ ಸಾಮಗ್ರಿಗಳು ಹಾಳಾಗಿದ್ದರಿಂದ ನಿರಾಸೆಯಿಂದ ಮನೆಗೆ ಹಿಂತಿರುಗುವಂತಾಗಿದೆ.
‘ಬೆಳಿಗ್ಗೆ ಸಮಯ ಸಿಗುವುದರಿಂದ ಜಿಮ್ ಮಾಡಲು ತೋಳನಕೆರೆ ಉದ್ಯಾನಕ್ಕೆ ಬರುತ್ತೇವೆ. ಆದರೆ, ಜಿಮ್ ಪರಿಕರಗಳು ಹಾಳಾಗಿದ್ದು, ಜಿಮ್ ಮಾಡಲು ಯೋಗ್ಯವಾಗಿಲ್ಲ. ಕೆಲವು ಕಿತ್ತಿದ್ದು, ಇನ್ನು ಕೆಲವು ಮುರಿದು ಬಿದ್ದಿವೆ. ಆದ್ದರಿಂದ ವಾಕಿಂಗ್ ಮಾಡಿ ಮನೆಗೆ ಹೋಗುತ್ತೇವೆ’ ಎಂದು ಕುಮಾರಪಾರ್ಕ್ ನಿವಾಸಿ ಪ್ರಕಾಶ ಬಡಿಗೇರ ಹೇಳಿದರು.
‘ನಾವು ನಿತ್ಯ ಇಲ್ಲಿಗೆ ವಾಕಿಂಗ್ ಬರುತ್ತೇವೆ. ಕೆರೆಯ ದಂಡೆ ಸೇರಿದಂತೆ ಎಲ್ಲೆಡೆ ಕಸ ಬೆಳೆದಿದೆ. ಇದರಿಂದ ಹಾವು, ಹುಳು-ಹುಪ್ಪಡಿಯ ಭಯ ಕಾಡುತ್ತದೆ. ಮಕ್ಕಳನ್ನು ಕರೆದುಕೊಂಡು ಬರುವವರಿಗೂ ಭಯವುಂಟಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟವರು ನಿಗಾ ವಹಿಸಬೇಕು’ ಎಂದು ರವಿ ನಗರ ನಿವಾಸಿ ಬಸವರಾಜ ಪಾಟೀಲ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.