– ಐಸ್ಟಾಕ್ ಚಿತ್ರ
ಹುಬ್ಬಳ್ಳಿ: ನಗರದ ಐಬಿಎಂಆರ್ ಕಾಲೇಜು ಕ್ಯಾಂಪಸ್‌ನಲ್ಲಿ ಐಬಿಎಂಆರ್ ಶಿಕ್ಷಣ ಸಂಸ್ಥೆ ಹಾಗೂ ಕ್ಲಿಕ್‌ನೌಕರಿ.ಕಾಮ್ ಸಹಯೋಗದಲ್ಲಿ ಜೂನ್ 12ರಂದು ‘ಪ್ರಗತಿ’ ಶೀರ್ಷಿಕೆಯಡಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಡೀನ್ ಸದಾನಂದ ಹಾವಣಗಿ ಮಾತನಾಡಿ, ‘ಈ ಬಾರಿ ನಡೆಯುತ್ತಿರುವುದು 15ನೇ ಆವೃತ್ತಿಯ ಉದ್ಯೋಗ ಮೇಳ. ಪದವಿ ಅಂತಿಮ ವರ್ಷದ ಪರೀಕ್ಷೆಗೂ ಮುನ್ನ ಈ ಮೇಳ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ನೌಕರಿ ಪಡೆದುಕೊಳ್ಳಲು ಅನುಕೂಲವಾಗಲಿದೆ’ ಎಂದರು.
‘ನೂರಕ್ಕೂ ಅಧಿಕ ಉದ್ಯಮ ಸಂಸ್ಥೆಗಳು ಮೇಳಕ್ಕೆ ಭಾಗವಹಿಸುವುದನ್ನು ಈಗಾಗಲೇ ಖಚಿತಪಡಿಸಿವೆ. 8 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳಿದ್ದು, ಈಗಾಗಲೇ 3,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವವರು, ಪದವೀಧರರು, ಡಿಪ್ಲೊಮಾ ಅಭ್ಯರ್ಥಿಗಳು, ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳು ಮೇಳದಲ್ಲಿ ಭಾಗಿಯಾಗಬಹುದು. ಯಾವ ಜಿಲ್ಲೆಯವರಾದರೂ ಭಾಗಿಯಾಗಲು ಅವಕಾಶವಿದೆ. ಆಸಕ್ತರು ತಲಾ ಐದು ಪ್ರತಿ ಸ್ವವಿವರ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ತರಬೇಕು. ಒಬ್ಬ ಆಕಾಂಕ್ಷಿ ಗರಿಷ್ಠ ಐದು ಕಂಪನಿ ಸಂದರ್ಶನಗಳಿಗೆ ಹಾಜರಾಗಬಹುದು’ ಎಂದು ತಿಳಿಸಿದರು.
‘90157 77101 ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದೆ’ ಎಂದು ಹೇಳಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 96630 41500 ಸಂಖ್ಯೆಗೆ ಸಂಪರ್ಕಿಸಬಹುದು.
ಐಬಿಎಂಆರ್ ಸಂಸ್ಥೆಗಳ ಸಿಇಒ ಪ್ರದೀಪ್ ಶರ್ಮಾ, ಎಂಬಿಎ ವಿಭಾಗದ ನಿರ್ದೇಶಕಿ ರೇಖಾ ಮಹೇಂದ್ರಕರ್, ಪ್ರಾಂಶುಪಾಲ ಅರುಣ್ ಶೆಟ್ಟಿ, ಉದ್ಯೋಗ ಅಧಿಕಾರಿ ವಿವೇಕ ಪಾಟೀಲ, ಕ್ಲಿಕ್‌ನೌಕರಿ.ಕಾಮ್ ನಿರ್ದೇಶಕ ರೋಹನ್ ಕುಲಕರ್ಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.