ADVERTISEMENT

ಅಳ್ನಾವರ: ದೇವಿಯರ ಮೂರ್ತಿ ಹೊತ್ತ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:42 IST
Last Updated 15 ಮೇ 2025, 13:42 IST
ಅಳ್ನಾವರ ಸಮೀಪದ ಡೋರಿ ಗ್ರಾಮದ ಗ್ರಾಮದೇವಿಯರನ್ನು ಮುಸಲ್ಮಾನರು ಹೆಗಲ ಮೇಲೆ ಹೊತ್ತು ಹೊನ್ನಾಟವಾಡಿ ಭಾವೈಕ್ಯ ಮೆರೆದರು
ಅಳ್ನಾವರ ಸಮೀಪದ ಡೋರಿ ಗ್ರಾಮದ ಗ್ರಾಮದೇವಿಯರನ್ನು ಮುಸಲ್ಮಾನರು ಹೆಗಲ ಮೇಲೆ ಹೊತ್ತು ಹೊನ್ನಾಟವಾಡಿ ಭಾವೈಕ್ಯ ಮೆರೆದರು   

ಅಳ್ನಾವರ: ಸಮೀಪದ ಡೋರಿ ಗ್ರಾಮದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿ ಜಾತ್ರೆಯ ಹೊನ್ನಾಟದ ಕೊನೆಯ ದಿನವಾದ ಗುರುವಾರ, ಹಿಂದೂ ಭಕ್ತರೊಟ್ಟಿಗೆ ಮುಸಲ್ಮಾನರೂ ಕೂಡಿ, ದೇವಿಯರನ್ನು ಹೆಗಲ ಮೇಲೆ ಹೊತ್ತು ಹೊನ್ನಾಟವಾಡಿ ಭಾವೈಕ್ಯ ಮೆರೆದರು.

‘ಹೊನ್ನಾಟದಲ್ಲಿ ಭಾಗಿಯಾಗಲೆಂದು ಗ್ರಾಮದ ಜುಮ್ಮಾ ಮಸೀದಿ ಎದುರು ಬೆಳಿಗ್ಗೆ ಜಮಾಯಿಸಿದ್ದ 200ಕ್ಕೂ ಹೆಚ್ಚು ಮುಸ್ಲಿಮರು ಗ್ರಾಮದ ಮುಖ್ಯ ಬೀದಿಯಲ್ಲಿ ಡೊಳ್ಳು ಬಾರಿಸುತ್ತ, ದೇವಿಯ ಉಡಿ ತುಂಬುವ ಸಾಮಗ್ರಿ ತೆಗೆದುಕೊಂಡು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು. ದೇವಿಗೆ ಉಡಿ ತುಂಬಿ ಮಂಗಳಾರತಿ ಆದ ನಂತರ ಮುಸ್ಲಿಂ ಸಂಪ್ರದಾಯದಂತೆ ಕಲಾಮ ಪಠಣ ನಡೆಯಿತು. ಏಕತೆ, ಶಾಂತಿಗಾಗಿ ಪ್ರಾರ್ಥನೆ ಮಾಡಲಾಯಿತು’ ಎಂದು ಹಿರಿಯರಾದ ಅಲ್ಲಾಭಕ್ಷ ಬಡಗಿ ತಿಳಿಸಿದರು.

ಬಿಳಿ ಶುಭ್ರ ಬಟ್ಟೆ ತೊಟ್ಟ ಮುಸ್ಲಿಮರು ತಲೆಗೆ ಬಿಳಿ ಟೋಪಿ ಧರಿಸಿ ಹೊನ್ನಾಟದ ಓಕುಳಿಯಲ್ಲಿ ಮಿಂದೆದ್ದರು. ಮುಸ್ಲಿಂ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹಿಂದೂಗಳು ಜಾತ್ರೆಗಾಗಿ ಮಾಡುವ ಎಲ್ಲ ಸಂಪ್ರದಾಯ, ಪದ್ಧತಿಗಳನ್ನು ಚಾಚೂ ತಪ್ಪದೆ ಅವರು ಪಾಲಿಸಿದ್ದಾರೆ.

‘ನಮ್ಮ ಮನೆಗಳಿಗೆ, ಮಸೀದಿಗೆ ಬಣ್ಣ ಹಚ್ಚಲಾಗಿದೆ. ಸ್ನೇಹಿತರು, ಬಂಧುಗಳನ್ನು ಜಾತ್ರೆಗೆ ಅಹ್ವಾನಿಸಿದ್ದೇವೆ. ಸಮುದಾಯದಿಂದ ದೇಣಿಗೆ ಸಂಗ್ರಹಿಸಿ ಜಾತ್ರೆ ಆಚರಣೆಗೆ ನೀಡಲಾಗಿದೆ’ ಎಂದು ಇಸ್ರತಅಲಿ ಹಳಿಯಾಳ ಹೇಳಿದರು.

ಈ ಗ್ರಾಮದಲ್ಲಿ ನಡೆಯುವ ಮೊಹರಂ ಮತ್ತು ಹಜರತ್ ಬಾಬಾಚಾವಲಿ ದರ್ಗಾದ ಉರುಸ್‌ನಲ್ಲಿ ಎಲ್ಲ ಸಮುದಾಯದವರು ಭಾಗಿಯಾಗುವುದು ವಾಡಿಕೆ.

ಹಿರಿಯರಾದ ಇಬ್ರಾಹಿಂಸಾಬ ಬಡಗಿ, ಹಜರತಸಾಬ ಬಡಗಿ, ಶಿಖಂದರ ನದಾಫ್, ಬಾಬಾಜಾನ ಪಾಟೀಲ, ಜೈತುನಬಿ ಮುಲ್ಲಾ, ಮುಕುಂಸಾಬ ಮುಲ್ಲಾ, ಬಾಬಾಸಾಬ ಶೇಖಸನದಿ, ದಾದಾ ಪಾಟೀಲ, ಬಾಳುಸಾಬ ಇದ್ದರು.

ಮೇ 16ರಂದು ಮಧ್ಯಾಹ್ನ ರಥೋತ್ಸವ ನಡೆಯಲಿದೆ.

ಅಳ್ನಾವರ ಸಮೀಪದ ಡೋರಿ ಗ್ರಾಮದ ಗ್ರಾಮದೇವಿಯರನ್ನು ಮುಸಲ್ಮಾನರು ಹೆಗಲ ಮೇಲೆ ಹೊತ್ತು ಹೊನ್ನಾಟವಾಡಿ ಭಾವೈಕ್ಯ ಮೆರೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.