
ಚನ್ನರಾಯಪಟ್ಟಣ: ‘ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ತೊಂದರೆ ಇಲ್ಲ’ ಎಂದು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ. ಮಹೇಶ್ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ರೆಡ್‍ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕ, ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದ ಒತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯನ್ನು ನಿಯಂತ್ರಿಸಬಹುದು. ಕೊಲಸ್ಟ್ರಾಲ್ ಕಡಿಮೆಯಾಗುತ್ತದೆ. ಆರೋಗ್ಯವಂತರು ವರ್ಷದಲ್ಲಿ 3-4 ಸಲ ರಕ್ತದಾನ ಮಾಡಬಹುದು. ಒಬ್ಬ ವ್ಯಕ್ತಿಯಿಂದ 450 ಎಂಎಲ್ ರಕ್ತ ಸಂಗ್ರಹಿಸಲಾಗುತ್ತದೆ. 24 ಗಂಟೆಯಲ್ಲಿ ವ್ಯಕ್ತಿಯಲ್ಲಿ ರಕ್ತ ವೃದ್ಧಿಯಾಗುತ್ತದೆ. 6 ವಾರಗಳಲ್ಲಿ ರಕ್ತದ ಕಣಗಳು ವೃದ್ಧಿಯಾಗುತ್ತವೆ. ಕೃತಕವಾಗಿ ರಕ್ತವನ್ನು ಸೃಷ್ಠಿಸಲು ಸಾಧ್ಯವಿಲ್ಲ ಎಂದು ಹೇಳಿದರು.
‘ ಡೆಂಗಿ ಕಾಯಿಲೆ ಹರಡುತ್ತಿದ್ದು, ಹೆಚ್ಚು ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ನೊಂದವರಿಗೆ ನೆರವಾಗ ಬೇಕು’ ಎಂದರು.
ಹಾಸನದ ಜಿಲ್ಲಾ ರಕ್ತನಿಧಿ ಘಟಕದ ನೋಡೆಲ್ ಅಧಿಕಾರಿ ಡಾ. ನಾಗಲಕ್ಷ್ಮಿ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ್, ಕಾಲೇಜಿನ ಯುವರೆಡ್ ಕ್ರಾಸ್ ಘಟಕದ ಸಂಯೋಜಕಿ ಎಂ. ನಿರುಪಮಾ, ದೈಹಿಕಶಿಕ್ಷಣ ನಿರ್ದೇಶಕೆ ಜೆ. ಭಾಸ್ಕರ, ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಡಿ.ಕೆ. ಮಂಜುನಾಥ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು, ಸಹಾಯಕ ಪ್ರಾಧ್ಯಾಪಕರಿಂದ 40 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.