ADVERTISEMENT

ದಾರಿ ಯಾವುದಯ್ಯ ಚನ್ನರಾಯಪಟ್ಟಣಕ್ಕೆ?

ಗುತ್ತಿಗೆದಾರ, ಎಂಜಿನಿಯರ್‌ಗಳ ಬೇಜವಾವ್ದಾರಿಯಿಂದ ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 4:26 IST
Last Updated 26 ಜೂನ್ 2025, 4:26 IST
ಹೊಳೆನರಸೀಪುರದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿರುವುದು 
ಹೊಳೆನರಸೀಪುರದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿರುವುದು    

ಹೊಳೆನರಸೀಪುರ: ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಹಾಗೂ ಇಲಾಖೆಯ ಎಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ, ವಾಹನಗಳ ಚಾಲಕರಿಗೆ ತೀವ್ರ ತೊಂದರೆ ಆಗುತ್ತಿದ್ದು, ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಚನ್ನಾಂಬಿಕ ವೃತ್ತದಿಂದ ಕನಕಭವನದವರೆಗೆ ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಹಾಗೂ ಹಾಸನ ಸಂಪರ್ಕಿಸುವ ರಸ್ತೆಯನ್ನು₹29 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣಕ್ಕಾಗಿ  ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದೆ.  ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ  ಮಣ್ಣು ಸುರಿದು  ಬಂದ್ ಮಾಡಿದ್ದಾರೆ.

ರಸ್ತೆ ಬಂದ್ ಮಾಡಿದ ಗುತ್ತಿಗೆದಾರರು, ಚನ್ನರಾಯಪಟ್ಟಣಕ್ಕೆ ಹೋಗಲು ಬದಲಿ ರಸ್ತೆ ಯಾವುದು ಎಂದು ಫಲಕ ಹಾಕದ ಕಾರಣ  ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಚನ್ನರಾಯಪಟ್ಟಣಕ್ಕೆ ಸಾಗುವ ರಸ್ತೆ ಹುಡುಕಲು ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ADVERTISEMENT

ಚನ್ನರಾಯಪಟ್ಟಣಕ್ಕೆ ಹೋಗಲು ತೊಂದರೆ ಅನುಭವಿಸುತ್ತಿದ್ದರೂ, ಮಾರ್ಗಸೂಚಿ ಫಲಕ ಹಾಕಿಸಬೇಕಾದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಪಟ್ಟಣದ ಸತೀಶ್‌ ದೂರಿದರು.

ಈ ಬಗ್ಗೆ ಮಾಹಿತಿಗಾಗಿ ಹೆದ್ದಾರಿ ವಿಭಾಗದ ಎಂಜಿನಿಯರ್ ನಾಗವೇಣಿ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

‘ಹೀಗೆ ಹೋಗಿ...’ 
ಚನ್ನರಾಯಪಟ್ಟಣಕ್ಕೆ ಹೋಗುವವರು ಸೂರನಹಳ್ಳಿ ರೈಲ್ವೆ ಗೇಟ್‌ ದಾಟಿ ಹೋಗಬೇಕು. ಈ ಗೇಟ್‌ಗೆ ಹೋಗಲು ಮೈಸೂರು ಕಡೆಯಿಂದ ಬರುವ ವಾಹನಗಳು ಬಸ್‌ ನಿಲ್ದಾಣದ ಸಮೀಪ ಇರುವ ಅಂಬೇಡ್ಕರ್ ವೃತ್ತದಲ್ಲಿ ಎಡಕ್ಕೆ ತಿರುಗಿ ಗಾಂಧೀವೃತ್ತದ ಮೂಲಕ ಅರಕಲಗೂಡು ರಸ್ತೆಯಲ್ಲಿ ಸ್ವಲ್ಪ ದೂರ ಸಾಗಬೇಕು. ನಂತರ ಅಂಚೆ ಕಚೇರಿ ಸಮೀಪ ಬಲಕ್ಕೆ ತಿರುಗಿ ರಿವರ್‌ ಬ್ಯಾಂಕ್ ರಸ್ತೆ ಚನ್ನಾಂಬಿಕ ವೃತ್ತದ ಮೂಲಕ ಸೂರನಹಳ್ಳಿ ಗೇಟ್‌ ಮೂಲಕ ಚನ್ನರಾಯಪಟ್ಟಣ ರಸ್ತೆಗೆ ತಿರುಗಬೇಕು . ಇಲ್ಲವೇ ಬಸವ ಭವನ ರಸ್ತೆ ಕಡೆ ತಿರುಗಿ ಬೈಪಾಸ್ ರಸ್ತೆಯ ಮೂಲಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಸ್ತೆಯಲ್ಲಿ ಸಾಗಿ ಚನ್ನರಾಯಪಟ್ಟಣಕ್ಕೆ ಹೋಗಬೇಕು ಎಂದು ಆಟೋ ವರ್ಕ್ಸ್‌ ಮಾಲೀಕ ಮುಜಾಹಿದ್‌ ಹೇಳಿದರು.  .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.