
ಹಾಸನ: ‘ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ, ಸಮಾಜದಲ್ಲಿ ಸಮಾನತೆ ಬಂದಿಲ್ಲ. ಶ್ರೀಮಂತರು ಶ್ರೀಮಂತರೇ, ಬಡವರು ಬಡವರೇ. ಜಾತಿ ವ್ಯವಸ್ಥೆಯಿಂದಾಗಿ ಸಮಾನ ಅವಕಾಶ ಸಿಗದೇ ಅಸಮಾನತೆ ಇನ್ನೂ ಇದೆ. ಅಸಮಾನತೆ ತೊಡದು ಹಾಕುವವರೆಗೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆ ತೊಡೆದು ಹಾಕುವ ಪ್ರಯತ್ನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಡಾ.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಕೊಟ್ಟರು. ಸಮಾನತೆ, ಭ್ರಾತೃತ್ವ, ಸಮಸಮಾಜ ನಿರ್ಮಾಣ ಮಾಡಬೇಕು. ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ಕೊಡಬೇಕು ಎಂದು ಅವರು ಹೇಳಿದ್ದರು. ಸಮಾನ ಅವಕಾಶ ಇಲ್ಲದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸಾರ್ಥಕವಾಗಲ್ಲ. ಕೇವಲ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅನುಗುಣವಾಗಿ ಎಲ್ಲ ಜಾತಿ, ಧರ್ಮಗಳ ಬಡವರಿಗೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ’ ಎಂದು ಹೇಳಿದರು.
‘2023 ಮೇ 23 ಕ್ಕೆ ಅಧಿಕಾರಕ್ಕೆ ಬಂದೆವು. ಜೂನ್ 11 ರಿಂದ ಶಕ್ತಿ ಯೋಜನೆ ಜಾರಿ ಮಾಡಿದೆವು. 600 ಕೋಟಿಗೂ ಹೆಚ್ಚು ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಜುಲೈನಲ್ಲಿ ಅನ್ನಭಾಗ್ಯ, ಗೃಹ ಜ್ಯೋತಿ, ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ, 2024 ರ ಜನವರಿಗೆ ಯುವನಿಧಿ ಸೇರಿದಂತೆ ಅಧಿಕಾರಕ್ಕೆ ಬಂದ ವರ್ಷದಲ್ಲಿಯೇ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಎರಡೂವರೆ ವರ್ಷದಲ್ಲಿ ₹1,08,135 ಕೋಟಿಯನ್ನು ಗ್ಯಾರಂಟಿ ಮೂಲಕ ಜನರಿಗೆ ನೀಡಿದ್ದೇವೆ. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ನಿಲ್ಲುತ್ತವೆ ಎಂದು ಪ್ರತಿಪಕ್ಷದವರು ಹೇಳಿದರು. ಆದರೆ ನಿಂತಿವೆಯೇ’ ಎಂದು ಪ್ರಶ್ನಿಸಿದರು.
‘ಈ ಕಾರ್ಯಕ್ರಮಗಳು ಸರಿಯಲ್ಲ ಎಂದು ಹೇಳುವವರಿಗೆ ಜನರೇ ಉತ್ತರ ಕೊಡಬೇಕು. ₹1 ಲಕ್ಷ ಕೋಟಿಯನ್ನು ಖರ್ಚು ಮಾಡುತ್ತಿರುವುದು ಅಸಮಾನತೆ ನಿವಾರಿಸುವುದಕ್ಕಾಗಿ. ಡಾ.ಅಂಬೇಡ್ಕರ್ ಅವರನ್ನು ನೆನೆಯೋಣ. ಅಸಮಾನತೆ ತೊಡದು ಹಾಕುವ ಕೆಲಸ ಮಾಡೋಣ. ನಮ್ಮದು ಸಂವಿಧಾನದ ಪರವಾಗಿರುವ ಸರ್ಕಾರ’ ಎಂದರು.
‘2013– 18 ರವರೆಗೆ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರ ಚುನಾವಣೆಯಲ್ಲಿ 492 ಭರವಸೆ ನೀಡಿದ್ದೇವು. ಎರಡೂವರೆ ವರ್ಷದಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ಇಲ್ಲಿಯವರೆಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ’ ಎಂದು ಹೇಳಿದರು.
‘ಹಾಸನ ನಮಗೆ ಪಕ್ಕದ ಜಿಲ್ಲೆ. ಇಲ್ಲಿನ ರಾಜಕೀಯ, ಸಂಸ್ಕೃತಿ ನನಗೆ ಗೊತ್ತು. ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ಹೇಮಾವತಿ ಜಲಾಶಯ ಉದ್ಯಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಾತು ಕೊಡಲ್ಲ. ಕೊಟ್ಟ ಮೇಲೆ ಮಾಡಿಯೇ ಮಾಡುತ್ತೇವೆ. ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ’ ಎಂದು ಹೇಳಿದರು.
ಶಿರಾಡಿ ಸುರಂಗ– ಎನ್‌ಎಚ್ಎಐಗೆ ಎನ್‌ಒಸಿ: ‘ಶಿರಾಡಿ ಘಾಟ್ ಸುರಂಗ ನಿರ್ಮಾಣ ಮಾಡುವ ಸಂಬಂಧ ಎನ್‌ಒಸಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
‘3 ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ₹300 ಕೋಟಿ ನೀಡಲಾಗಿದೆ. ಬೇಲೂರಿನ ಯಗಚಿ ನದಿ ಸೇತುವೆ ₹50 ಕೋಟಿ, ಕೊಳ್ಳೂರು, ಕಟ್ಟೇಪುರ ಸೇತುವೆಗೆ ₹40 ಕೋಟಿ ಅನುದಾನ ಒದಗಿಸಲಾಗಿದೆ’ ಎಂದರು.
‘ಆನೆ ಹಾವಳಿ ತಡೆಗೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ನಾಲೆಗಳ ದುರಸ್ತಿ ಮಾಡುವುದು ಅಗತ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಈ ಸಮಸ್ಯೆ ಇದ್ದು, ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಒತ್ತು ನೀಡಬೇಕು’ ಎಂದರು.
‘ಕೃಷ್ಣ ಬೈರೇಗೌಡರು 30 ತಿಂಗಳಿಂದ ಕಷ್ಟಪಟ್ಟು ಜನರ ಮನೆ ಬಾಗಿಲಿಗೆ ಕಂದಾಯ ದಾಖಲೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.
ಜನರ ಮನೆ ಬಾಗಿಲಿಗೆ ಸೌಲಭ್ಯ: ‘ಕಂದಾಯ ಇಲಾಖೆಯ ಆಂದೋಲನದ ಮೂಲಕ ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡ, ಶೋಷಿತ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ’ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
‘ರಾಜ್ಯದ ಹಣಕಾಸು ವ್ಯವಸ್ಥೆ ಸುಭದ್ರವಾಗಿದೆ. ಹಿಂದಿನ ಸರ್ಕಾರ ಬಿಟ್ಟುಹೋಗಿದ್ದ ₹64 ಸಾವಿರ ಕೋಟಿ ಕಾಮಗಾರಿಯ ಬಿಲ್ ಬಾಕಿ ಉಳಿಸಿತ್ತು. ಏಕಕಾಲದಲ್ಲಿ ₹2 ಲಕ್ಷ ಕೋಟಿ ಕಾರ್ಯಭಾರವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸಲಾಗಿತ್ತು. ಇದನ್ನು ಮಾಡಲು ಹಂತಹಂತವಾಗಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದರು.
‘ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಲಾಗಿದೆ ಎಂದು ಜಿಲ್ಲೆಯ ಮುಖಂಡರೊಬ್ಬರು ಆರೋಪಿಸಿದ್ದಾರೆ. ಆದರೆ, ಸರ್ಕಾರದ ಮೇಲೆ ಇರುವ ಪ್ರೀತಿಗೆ ಇಲ್ಲಿರುವ ಜನಸಮೂಹವೇ ಸಾಕ್ಷಿ’ ಎಂದರು.
‘ಪಿಎಂಎವೈ ಯೋಜನೆಯಡಿ ಅನುದಾನ ಸಿಗುತ್ತಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳೇ ನಮಗೆ ಬೇಡ. ನಮ್ಮದೇ ಹಣದಲ್ಲಿ ಜನರಿಗೆ ಮನೆ ಕೊಡೋಣ. ಜಲಜೀವನ್ ಮಿಷನ್ ಯೋಜನೆಯಡಿ ₹28 ಸಾವಿರ ಕೋಟಿ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಕೇವಲ ₹11 ಸಾವಿರ ಕೋಟಿ ಬಿಡುಗಡೆ ಮಾಡಿದೆ. ರಾಜ್ಯದಿಂದ ₹2.75 ಲಕ್ಷ ಕೋಟಿ ತೆರಿಗೆ ಪಡೆದು, ಕೇವಲ ರಾಜ್ಯಕ್ಕೆ ₹65 ಸಾವಿರ ಕೋಟಿಯನ್ನು ಕೇಂದ್ರ ಕೊಡುತ್ತಿದೆ. ಅಂಕಿ–ಅಂಶಗಳೊಂದಿಗೆ ಈ ಬಗ್ಗೆ ಬಹಿರಂಗ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಸಂಸದ ಶ್ರೇಯಸ್ ಪಟೇಲ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ, ಎಂ.ಎ. ಗೋಪಾಲಸ್ವಾಮಿ, ಶ್ರೀಧರ್ ಗೌಡ, ಮುರಳಿಮೋಹನ್, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ ಸೇರಿದಂತೆ ಹಲವು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ವಾಗತಿಸಿದರು. ಶಾಸಕ ಎಚ್.ಕೆ. ಸುರೇಶ್ ವಂದಿಸಿದರು.
ಭೂ ಮಾಲೀಕತ್ವದ ಗ್ಯಾರಂಟಿ
‘ಭೂಮಿಯ ಮಾಲೀಕತ್ವಕ್ಕೆ ಖಚಿತತೆ ಕೊಡುವ ಮೂಲಕ ಭೂ ಗ್ಯಾರಂಟಿ ಯೋಜನೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೂಚನೆಯಂತೆ ಜನರ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ದಶಕಗಳಿಂದ ಕಗ್ಗಂಟಾಗಿದ್ದ ಈ ವಿಷಯದ ಬಗ್ಗೆ ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಳೀಕೃತ ದರಖಾಸ್ತು ಪೋಡಿ ದುರಸ್ತು ಅಭಿಯಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಇದು ಅಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರು ಹೇಳಿದ್ದರು. ಆ ಸವಾಲನ್ನು ಸ್ವೀಕರಿಸಿ ಕೆಲಸ ಮಾಡಿದ್ದೇವೆ’ ಎಂದರು. ‘ಒಂದೇ ವರ್ಷದಲ್ಲಿ 24 ಸಾವಿರ ರೈತರ ಜಮೀನು ಪೋಡಿ ದುರಸ್ತು ಕೈಗೆತ್ತಿಕೊಂಡಿದ್ದೇವೆ. 2013–18 ರವರೆಗೆ ರಾಜ್ಯದಲ್ಲಿ 8500 ಆಗಿತ್ತು. ಈಗ 1.15 ಲಕ್ಷ ಪ್ರಕರಣ ದುರಸ್ತು ಮಾಡಿದ್ದೇವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಲಾಗುತ್ತಿದೆ’ ಎಂದರು. ‘ಹಿಮ್ಸ್‌ಗೆ ₹ 55 ಲೋಕೋಪಯೋಗಿ ಇಲಾಖೆಯ ₹30 ಕೋಟಿ ಸೇರಿದಂತೆ ₹290 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ನೆರವೇರಲಿದೆ. ಹಿರೀಸಾವೆ ಹೋಬಳಿಯ ಏತ ನೀರಾವರಿ ಯೋಜನೆ ₹74 ಕೋಟಿ ವೆಚ್ಚ ಹಾಸನ ತಾಲ್ಲೂಕು ಕಚೇರಿ ಉದ್ಘಾಟನೆ ಹಿಮ್ಸ್‌ಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹57 ಕೋಟಿ ನೀಡಲಾಗಿದೆ. ಇನ್ನೂ ₹17 ಕೋಟಿ ಒದಗಿಸುವ ಭರವಸೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದರು.
ಜಿಲ್ಲೆಯ ಅಗತ್ಯಗಳ ಪಟ್ಟಿ ಮಾಡಿದ ಕೃಷ್ಣ ಬೈರೇಗೌಡ
‘ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದಕ್ಕೆ ಮುಕ್ತಿ ನೀಡಬೇಕು. ಹೇಮಾವತಿ ನಾಲೆಗಳ ಆಧುನೀಕರಣಕ್ಕೆ ಒತ್ತು ನೀಡಬೇಕು. ಹಂತಹಂತವಾಗಿ ಆದರೂ ಕೆಲಸ ಕೈಗೆತ್ತಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ಹೇಮಾವತಿ ಜಲಾಶಯದ ಕೆಳಗೆ 700 ಎಕರೆ ಜಾಗವಿದ್ದು ಬೃಂದಾವನ ಮಾದರಿ ಉದ್ಯಾನಕ್ಕೆ ಅನುಮೋದನೆ ನೀಡಬೇಕು. ಗಂಡಸಿ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅವಕಾಶ ಮಾಡಿಕೊಡಬೇಕು. ಹಾಸನ ಮಹಾನಗರ ಪಾಲಿಕೆಗೆ ಹೆಚ್ಚುವರಿ ಹಳ್ಳಿಗಳು ಸೇರಿದ್ದು ಅದಕ್ಕೆ ಹೆಚ್ಚುವರಿ ಅನುದಾನ ನೀಡಬೇಕು. ಮಾನವ–ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು. ‘ರಾಜಕೀಯವಾಗಿ ಪ್ರಭಾವ ಹಾಗೂ ಮಹತ್ವ ಹೊಂದಿರುವ ಜಿಲ್ಲೆ ಹಾಸನ. ಘಟಾನುಘಟಿ ರಾಜಕಾರಣಿಗಳ ತವರೂರು. ಈ ಜಿಲ್ಲೆಯವರೇ ಸಚಿವರಾಗಬೇಕು ಎಂಬ ಕೂಗು ಇದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.