
ಅರಕಲಗೂಡು: ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರು ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ದೇವರಾಜ ಅರಸು ಭವನದಲ್ಲಿ ಸೋಮವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಬ್ರಿಡ್ಜ್ ಕೋರ್ಸ್ ತರಬೇತಿ ಹಾಗೂ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಪಡೆದವರು ಇತರೆ ಕಾರ್ಮಿಕರಿಗೂ ತಿಳಿಸುವ ಮೂಲಕ ಅವರಿಗೂ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು. ಮಕ್ಕಳ ಶಿಕ್ಷಣ, ಮದುವೆ, ಅಪಘಾತ ಪರಿಹಾರ ಸೇರಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಮಂಡಳಿ ಒದಗಿಸುತ್ತಿದೆ, ತಾಲ್ಲೂಕಿನಲ್ಲಿ ಇನ್ನೂ ನೋಂದಾಯಿಸಿಕೊಳ್ಳದ ಹಲವು ಕಾರ್ಮಿಕರು ಇದ್ದು ಅವರನ್ನು ಗುರುತಿಸಿ ಸೌಲಭ್ಯ ಕೊಡಿಸುವ ಕೆಲಸವಾಗಬೇಕು ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ ವಿದ್ಯಾವಂತರನ್ನಾಗಿ ಮಾಡಿದಾಗ ನಿಮ್ಮ ಕುಟುಂಬದ ಭವಿಷ್ಯ ಬದಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಅನೇಕ ಯೋಜನೆಗಳನ್ನು ನೀಡುತ್ತಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಅನಿಕೇತನ ಸಂಸ್ಥೆಯ ಸ್ವಯಂ ಸೇವಕ ಕಾರ್ತಿಕ್, ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಮಿಕ ನಿರೀಕ್ಷಕ ಎಚ್.ಪಿ.ರಘು, ತಾಲ್ಲೂಕು ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೇಶ್, ಜೈ ಭೀಮ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಎ.ಆರ್.ಶಿವಶೇಖರ್, ರಾಮನಾಥಪುರ ಸುಬ್ರಹ್ಮಣ್ಯ ಸ್ವಾಮಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಎಂ.ರಮೇಶ್ ಉಪಸ್ಥಿತರಿದ್ದರು. 545 ಮಂದಿ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.