
ಸಕಲೇಶಪುರ: ತಾಲ್ಲೂಕಿನ ಆನೇಮಹಲ್‌ನಿಂದ ಮಾರನಹಳ್ಳಿವರೆಗೆ ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಆನೇಮಹಲ್‌ನಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ಗುತ್ತಿಗೆದಾರ ಕಂಪನಿಯ ಎಂಜಿನಿಯರ್‌ಗಳೊಂದಿಗೆ ಅವರು ಮಾತನಾಡಿದರು.
2017 ರಿಂದ 10 ಕಿ.ಮೀ. ರಸ್ತೆ ನಿರ್ಮಾಣ ತೃಪ್ತಿ ತಂದಿಲ್ಲ. ಬೆಂಗಳೂರು–ಮಂಗಳೂರು ನಡುವಿನ ಈ ಹೆದ್ದಾರಿಯಲ್ಲಿ ನಿತ್ಯ 40 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಇಂತಹ ರಸ್ತೆಯನ್ನು ಹೆಚ್ಚು ಸುರಕ್ಷಿತವಾಗಿ ನಿರ್ಮಾಣ ಮಾಡಬೇಕು. ಆದರೆ ಕಟ್ಟಿರುವ ತಡೆಗೋಡೆಗಳು ಸಾಕಷ್ಟು ಕಡೆ ಕುಸಿದು ಬಿದ್ದಿವೆ. 90 ಡಿಗ್ರಿಯಲ್ಲಿ ಭೂಮಿ ಕತ್ತರಿಸಿ ಗುಡ್ಡ ಜರಿಯದಂತೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿಲ್ಲ ಎಂದರು.
ಹಿಂದೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಗುಡ್ಡ ಕುಸಿದು ಅಪಘಾತಗಳು ಸಂಭವಿಸಿರುವ ವರದಿ ಇದೆ. ಬೇಸಿಗೆ ಸಮಯದಲ್ಲಿ ಏಕೆ ಸುರಕ್ಷತಾ ಕಾಮಗಾರಿ ಮಾಡಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.
ಆನೇಮಹಲ್ ಗ್ರಾಮದಲ್ಲಿ ನಮ್ಮ ಮನೆ ಕುಸಿಯುವ ಭೀತಿ ಇದೆ. ನಾವು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಮನೆಗಳು ಹೆದ್ದಾರಿ ಭೂಸ್ವಾಧೀನಕ್ಕೂ ಸೇರಿಲ್ಲ. ಈಗ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಬಳಿ ಸಮಸ್ಯೆ ಹೇಳಿಕೊಂಡರು.
ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ ಮಾತನಾಡಿ, ಅಪಾಯದಲ್ಲಿರುವ ಕುಟುಂಬಗಳಿಗೆ ಈಗಾಗಲೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಮನೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ವಾಭಾವಿಕವಾಗಿ ಗುಡ್ಡ ಕುಸಿಯುತ್ತಿಲ್ಲ. 50 ವರ್ಷಗಳಿಂದ ಇದೇ ಜಾಗದಲ್ಲಿ ಜೀವನ ಮಾಡುತ್ತಿದ್ದೇವೆ. ಭೂಮಿಯನ್ನು ಕತ್ತರಿಸಿ ಸರಿಯಾಗಿ ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕಂಪನಿಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಆನೇಮಹಲ್ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಅಶ್ರಫ್ ದೂರಿದರು.
ನಿಜವಾಗಿಯೂ ಮನೆಗಳು ಅಪಾಯದ ಸ್ಥಿತಿಯಲ್ಲಿವೆ ಎಂಬುದು ನೋಡುವಾಗಲೇ ಗೊತ್ತಾಗುತ್ತದೆ. ಪ್ರತಿಯೊಬ್ಬರ ಸುರಕ್ಷತೆ ಮುಖ್ಯ. ಸದ್ಯದ ಮಟ್ಟಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಿರಿ. ಸಮಸ್ಯೆಗೆ ಪರಿಹಾರ ಮಾಡೋಣ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.
ತಹಶೀಲ್ದಾರ್ ಅರವಿಂದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್, ಮಣಿಕಂಠನ್ ಹಾಗೂ ಇತರರು ಇದ್ದರು.
ಆನೇಮಹಲ್‌ನಿಂದ–ಮಾರನಹಳ್ಳಿವರೆಗೆ ಯಾವುದೇ ಸಮಸ್ಯೆ ಉಂಟಾಗದಂತೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಗುತ್ತಿಗೆದಾರರ ಕಂಪನಿಯವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇಬೇಕು.–ಕೆ.ಎಸ್. ಲತಾಕುಮಾರಿ, ಜಿಲ್ಲಾಧಿಕಾರಿ
ಇದನ್ನು ಯಾರು ಹೆದ್ದಾರಿ ಅಂತಾರೆ?
‘ಇದನ್ನು ಯಾರು ರಾಷ್ಟ್ರೀಯ ಹೆದ್ದಾರಿ ಅಂತಾರೆ. ರಸ್ತೆ ತುಂಬಾ ಗುಂಡಿ ಹೊಳೆಯಂತೆ ನೀರು ಹರಿಯುತ್ತಿದೆ. ಹೇಗೆ ವಾಹನ ಓಡಿಸುತ್ತಾರೆ? ಹೆದ್ದಾರಿಯನ್ನು ಇಷ್ಟೊಂದು ಕೆಟ್ಟದಾಗಿ ಇಟ್ಟುಕೊಂಡಿದ್ದೀರಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸೈಯದ್ ಅಮೀದ್ ಉಲ್ಲಾ ಹಾಗೂ ಎಂಜಿನಿಯರ್‌ಗಳನ್ನು ಜಿಲ್ಲಾಧಿಕಾರಿ ಲತಾಕುಮಾರಿ ತರಾಟೆಗೆ ತೆಗೆದುಕೊಂಡರು. 8 ವರ್ಷಗಳಿಂದ ಈ ಭಾಗದಲ್ಲಿ ಹೆದ್ದಾರಿ ಕೆಲಸ ಮಾಡುತ್ತಿದ್ದೀರಿ. ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ರಸ್ತೆಯ ಮೇಲೆ ನೀರು ಹರಿಯುತ್ತದೆ ಎಂಬುದು ಗೊತ್ತಿಲ್ಲವೆ? ಮಳೆಗೂ ಮುನ್ನ ರಸ್ತೆಯ ಗುಂಡಿಗಳನ್ನು ಮುಚ್ಚಿ ಮಳೆ ನೀರು ಚರಂಡಿಯಲ್ಲಿ ಹರಿಯುವಂತೆ ಮಾಡದೇ ಏನು ಮಾಡ್ತಾ ಇದ್ರಿ? ಜನ ಹೇಗೆ ಈ ಹೆದ್ದಾರಿಯಲ್ಲಿ ಓಡಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಅದೇನು ಮಾಡುತ್ತೀರೋ ಗೊತ್ತಿಲ್ಲ ಇವತ್ತಿನಿಂದಲೇ ಗುಂಡಿಗಳನ್ನು ಮುಚ್ಚಿ ಚರಂಡಿಯಲ್ಲಿ ನೀರು ಹರಿಯುವಂತೆ ಮಾಡಬೇಕು. ನಾನಂತೂ ಸುಮ್ಮನಿರುವುದಿಲ್ಲ ಎಂದರು. ಇತ್ತ ಜಿಲ್ಲಾಧಿಕಾರಿ ತೆರಳುತ್ತಿದ್ದಂತೆಯೇ ಗುತ್ತಿಗೆದಾರರು ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.