
ಹಾಸನ: ಪ್ರಗತಿಯ ಹೆಸರಿನಲ್ಲಿ ಪರಿಸರ ಧ್ವಂಸ ಆಗಬಾರದು. ಸುಸ್ಥಿರ ಅಭಿವೃದ್ಧಿಯಿಂದ ಪರಿಸರಕ್ಕೂ ಪೂರಕವಾಗಿರುತ್ತದೆ ಎಂದು ‘ಪರಿಸರಕ್ಕಾಗಿ ನಾವೂ’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪರಿಸರಪ್ರೇಮಿಗಳು, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ‘ಉದಯ ವರದಿ ಬಳಗ’ದ ಆಶ್ರಯದಲ್ಲಿ ಶನಿವಾರ ನಡೆದ ‘ಹವಾವಾನ ವೈಪರೀತ್ಯ, ಕಾರಣ, ಬಿಕ್ಕಟ್ಟು ಮತ್ತು ಪರಿಹಾರ’ ವಿಚಾರಗೋಷ್ಠಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾಗತಿಕ ತಾಪಮಾನದಿಂದ ಹವಾಮಾನ ತುಂಬಾ ಅಪಾಯ ಸ್ಥಿತಿಯಲ್ಲಿದೆ. ಇದನ್ನು ತುರ್ತು ಪರಿಸ್ಥಿತಿ ಎಂದು ವಿಶ್ಲೇಷಿಸುತ್ತೇನೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ಪೀಳಿಗೆಗೆ ನರಕದ ವಾತಾವರಣ ಕಾಣಬೇಕಾಗುತ್ತದೆ. ಮಣ್ಣು, ನೀರು, ಬೆಟ್ಟ, ಗುಡ್ಡಗಳನ್ನು ಅಗೆಯುತ್ತಿದ್ದೇವೆ. ಜಲ ಗಾಳಿ ಮೂಲ ವಿಷವಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲೂ ಹಸಿರು ಹೊದಿಕೆಯೇ ಮಾಯವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ ಚಿಟ್ನಹಳ್ಳಿ ಮಹೇಶ ಮಾತನಾಡಿ, ‘ವೃಕ್ಷ ಕಡಿದರೆ ಭಿಕ್ಷೆ ಬೇಡುತ್ತೇವೆ. ನಮಗೆ ಜನಪದದ ಬದುಕು ಆದರ್ಶವಾಗಿದೆ. ಗಿಡ-ಮರಗಳೇ ವಿಸ್ಮಯ. ನಮ್ಮ ಚಿಂತನೆಗಳು ಬೇರೆ ಬೇರೆ ಕಡೆ ಸಾಗುತ್ತಿವೆ. ಪ್ರಕೃತಿಯ ಜವಾಬ್ದಾರಿಯನ್ನು ಮರೆತಿದ್ದೇವೆ. ಇಂತಹ ಹೊತ್ತಿನಲ್ಲಿ ಆತ್ಮಾವಲೋಕನ ತುಂಬಾ ಅಗತ್ಯ’ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಮತೇಶ್, ಸರ್ಕಾರಿ ನೌಕರರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಪತ್ರಕರ್ತ ವೆಂಕಟೇಶ್, ಸಿಐಟಿಯು ಮುಖಂಡ ಧರ್ಮೇಶ ಸೇರಿದಂತೆ ಇತರರು ಹಾಜರಿದ್ದರು.
ಸಿಎಂ ಚಿನ್ನದ ಪದಕ ಪುರಸ್ಕೃತರಾದ ವೈ.ಬಿ. ಕಾಂತರಾಜು, ಆರ್.ಜಿ.ಗಿರೀಶ್ ಅವರಿಗೆ ಸನ್ಮಾನ ಪ್ರಕೃತಿ ಜವಾಬ್ದಾರಿ ಮರೆಯದಿರಿ: ಸಲಹೆ ಜಾಗತಿಕ ತಾಪಮಾನದಿಂದ ಅಪಾಯದಲ್ಲಿ ಹವಾಮಾನ
‘ಎಲ್ಲರೂ ಕಾಳಜಿ ವಹಿಸಿದರೆ ಒಳ್ಳೆಯದು’ ‘ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಎಗ್ಗಿಲ್ಲದೆ ಕಡಿಯುತ್ತಿದ್ದರೂ ಪ್ರಶ್ನಿಸುವವರೇ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಪರಿಸರ ಇಲಾಖೆ ಏನು ಮಾಡುತ್ತಿದೆ? ಮಣ್ಣಿನ ಫಲವತ್ತತೆ ಹಾಳಾಗಿದೆ. ಜಗತ್ತು ಸಂಕಷ್ಟದಲ್ಲಿದೆ. ಬೆಟ್ಟ-ಗುಡ್ಡಗಳು ನಾಶವಾಗುತ್ತಿವೆ. ಅತಿಯಾದ ಮಳೆ ಹಾಗೂ ಬಿಸಿಲಿಗೆ ನಾವು ತಂದು ಕೊಂಡಿರುವ ಆಪತ್ತೇ ಕಾರಣ. ಹೀಗಾಗಿ ಹವಾಮಾನ ವೈಪರೀತ್ಯ ಅನುಭವಿಸುತ್ತಿದ್ದೇವೆ. ಹಲವು ಜೀವ ಸಂಕುಲಗಳು ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾಳಜಿ ವಹಿಸಿದರೆ ಒಳ್ಳೆಯದು’ ಎಂದು ಎ.ಟಿ.ರಾಮಸ್ವಾಮಿ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.