
ಹಿರೀಸಾವೆ: ಹೋಬಳಿಯ ಕಬ್ಬಳಿ, ಬೂಕ, ಹಿರೀಸಾವೆ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಸೋಮವಾರ ಕಾರ ಹಬ್ಬವನ್ನು ಆಚರಿಸಿದರು.
ಕಬ್ಬಳಿ ಗ್ರಾಮದಲ್ಲಿ ರೈತರು ಎತ್ತುಗಳು ಸೇರಿದಂತೆ ಮನೆಯಲ್ಲಿರುವ ಜಾನುವಾರಗಳ ಮೈ ತೊಳೆದು, ಬಣ್ಣ, ಬಲೂನ್ ಸೇರಿದಂತೆ ಇತರೆ ವಸ್ತುಗಳಿಂದ ರಾಸುಗಳನ್ನು ಸಿಂಗರಿಸಿದರು.
ರಾಸುಗಳನ್ನು ಗ್ರಾಮದ ಹೊರಭಾಗದಲ್ಲಿರುವ ಮೂಲ ಸ್ಥಾನಕ್ಕೆ ಕರೆತಂದರು. ಅಲ್ಲಿ ಬಸವಣ್ಣ ಮೂರ್ತಿಗೆ ಪೂಜೆ ಸಲ್ಲಿಸಿ, ಗ್ರಾಮಕ್ಕೆ ಮರಳಿದರು. ಹೆಬ್ಬಾಗಿಲಿನಲ್ಲಿ ಕಟ್ಟಿದ್ದ ತೋರಣವನ್ನು ಕಿತ್ತು, ಎತ್ತುಗಳನ್ನು ಓಡಿಸಿದರು. ಮನೆಯಲ್ಲಿರುವ ಕೃಷಿ ಪರಿಕರಗಳು ಮತ್ತು ರಾಸುಗಳಿಗೆ ಪೂಜೆ ಸಲ್ಲಿಸಿದರು.
ಹಿರೀಸಾವೆಯಲ್ಲಿ ಕಾರ ಹಬ್ಬದ ಪ್ರಯುಕ್ತ ಕರಿಕಲ್ಲು ದೇವರಿಗೆ ಎಡೆ ಇಟ್ಟು, ಪೂಜೆ ಸಲ್ಲಿಸಿದರು. ಬೂಕ ಗ್ರಾಮದಲ್ಲಿ ಹಬ್ಬವನ್ನು ರೈತರು ಆಚರಿಸಿದರು.
ಆಷಾಢ ಮಾಸ ಪ್ರಾರಂಭಕ್ಕೂ ಮೊದಲು ಈ ಭಾಗದಲ್ಲಿ ರೈತರು ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಕೆಲವು ಗ್ರಾಮಗಳಲ್ಲಿ ಆಷಾಢ ತಿಂಗಳ ನಂತರವೂ ಆಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.