
ಹಾಸನ: ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಜಿಲ್ಲೆಯ ಜನರ ಆರೋಗ್ಯದ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಲು ₹27.93 ಕೋಟಿ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಕೂಡಲೇ ಸೆ.22ರಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ, ನಿಂತಿದ್ದ ಕಾಮಗಾರಿ ಪೂರ್ಣಗೊಳಿಸಲು ₹ 9 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಲಾಗಿದೆ. ಕಟ್ಟಡ ಬಾಕಿ ಕಾಮಗಾರಿ ಪೂರ್ಣಗೊಳಿಸುವ ಕೆಲಸ ನಡೆದಿದೆ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಪೂರ್ಣ ಕಾರ್ಯರೂಪಕ್ಕೆ ತರಲು ಮತ್ತೊಂದು ದೊಡ್ಡ ಹೆಜ್ಜೆಯನ್ನು ನಮ್ಮ ಸರ್ಕಾರ ಇಟ್ಟಿದೆ. ಸೆ. 6 ರಂದು ಸದರಿ ಆಸ್ಪತ್ರೆಗೆ ಭೇಟಿ ನೀಡಲಾಗಿತ್ತು. ಈ ವೇಳೆ ತುರ್ತಾಗಿ ಕಾರ್ಯ ಪ್ರಾರಂಭಿಸಲು, ಪ್ರಾಥಮಿಕ ಹಂತದಲ್ಲಿ ಕಾರ್ಡಿಯಾಲಿಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಯುರಾಲಜಿ ಮತ್ತು ಕಾರ್ಡಿಯಾ ಥೊರಾಸಿಕ್ ಸರ್ಜರಿ ವಿಭಾಗಗಳಿಗೆ ಅವಶ್ಯಕವಿರುವ ಉಪಕರಣ ಮತ್ತು ಪಿಠೋಪಕರಣಗಳು ಹಾಗೂ ಇದಕ್ಕೆ ಅವಶ್ಯ ಅನುದಾನದ ಅಂದಾಜು ವೆಚ್ಚಕ್ಕೆ ಪ್ರಸ್ತಾವ ಸಲ್ಲಿಸಲು ಹಾಗೂ ಕ್ಯಾತ್ ಲ್ಯಾಬ್ ಸೌಲಭ್ಯಗಳನ್ನು ಒಳಗೊಂಡು ಕಾರ್ಡಿಯಾಕ್ ಯುನಿಟ್‍ನ್ನು ಸ್ಥಾಪಿಸಲು ಅಗತ್ಯ ಅನುದಾನದ ಅಂದಾಜು ಮೊತ್ತಕ್ಕೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.
ವೈದ್ಯಕೀಯ ಉಪಕರಣಗಳು, ಅವಶ್ಯ ಪೀಠೋಪಕರಣಗಳು ಮತ್ತು ಕ್ಯಾತ್ ಲ್ಯಾಬ್‍ನೊಂದಿಗೆ ಕಾರ್ಡಿಯಾಕ್ ಯುನಿಟ್ ಒಳಗೊಂಡು 5 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಆರಂಭಿಸಲು ಒಟ್ಟು ₹ 27.93 ಕೋಟಿ ಭರಿಸಲು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ₹ 27.93 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಲು ತೀರ್ಮಾನಿಸಿದೆ. ಮನವಿಗೆ ಸ್ಪಂದಿಸಿ, ಜಿಲ್ಲೆಯ ಜನರ ಧ್ವನಿಗೆ ಗೌರವಿಸಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.