ADVERTISEMENT

ಹಿರೀಸಾವೆ ದೊಡ್ಡ ಕೆರೆ ಏರಿಯ ಮಣ್ಣು ಕುಸಿತ; ಗ್ರಾಮಸ್ಥರಲ್ಲಿ ಆತಂಕ

ಹಿರೀಸಾವೆ ದೊಡ್ಡ ಕೆರೆ ಏರಿಯ ಮಣ್ಣು ಕುಸಿತ,

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:51 IST
Last Updated 25 ಅಕ್ಟೋಬರ್ 2025, 4:51 IST
ಹಿರೀಸಾವೆಯ ದೊಡ್ಡ ಕೆರೆ ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿದಿದ್ದರಿಂದ ರಸ್ತೆ ಪಕ್ಕದ ಕಬ್ಬಿಣದ ತಡೆಗೋಡೆ ಸಹ ಬಿದ್ದು ಹೋಗಿದೆ 
ಹಿರೀಸಾವೆಯ ದೊಡ್ಡ ಕೆರೆ ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿದಿದ್ದರಿಂದ ರಸ್ತೆ ಪಕ್ಕದ ಕಬ್ಬಿಣದ ತಡೆಗೋಡೆ ಸಹ ಬಿದ್ದು ಹೋಗಿದೆ    

ಹಿರೀಸಾವೆ: ಇಲ್ಲಿನ ದೊಡ್ಡ ಕೆರೆ ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿದಿದ್ದು, ಹಿರೀಸಾವೆ, ತೂಬಿನಕೆರೆ, ಕೊಳ್ಳೆನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಕೆರೆ 300 ಎಕರೆಯ ವಿಸ್ತೀರ್ಣ ಹೊಂದಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಏರಿಯ ಮಣ್ಣು ಕಳೆದ ಮೂರು ವರ್ಷದಿಂದ ಹಂತ, ಹಂತವಾಗಿ ಕುಸಿದು, ಈಗ ರಸ್ತೆ ಪಕ್ಕದವರೆಗೆ ಬಂದಿದೆ. ಏರಿಯ ರಸ್ತೆ ಮೇಲಿನ ಕಬ್ಬಿಣದ ತಡೆಗೋಡೆ ಸಹ ಬಿದ್ದು ಹೋಗಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಕಳೆದ ಎರಡು ವರ್ಷದ ಹಿಂದೆ ಏರಿ ದುರಸ್ತಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ, ಟೆಂಡರ್ ಮೂಲಕ ಗುತ್ತಿಗೆ ಸಹ ನೀಡಲಾಗಿತ್ತು. ಆದರೆ ಸಣ್ಣ ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಹೊಂದಾಣಿಕೆಯ ಕೊರತೆಯಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಹಿಂದೆ ಕೆರೆ ಏರಿ ಮಣ್ಣು ಕುಸಿದ ಸ್ಥಳಕ್ಕೆ, ಅಂದಿನ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಶಾಸಕ ಸಿ.ಎನ್. ಬಾಲಕೃಷ್ಣ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಸೇರಿದಂತೆ ಸಣ್ಣ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿ ಏರಿ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕೆಲಸ ಆಗಿಲ್ಲ. ಕಳೆದ ವರ್ಷ ಕೆರೆ ತುಂಬಿದಾಗ, ಅಪಾಯ ಇದೆ ಎಂದು ಅಧಿಕಾರಿಗಳು ಒಂದು ಅಡಿಯಷ್ಟು ಕೋಡಿಯನ್ನು ಕಿತ್ತು, ನೀರನ್ನು ಹೊರಹಾಕಿದ್ದರು. ಕಳೆದ ಬೇಸಿಗೆಯಲ್ಲಿ ದುರಸ್ತಿ ಮಾಡುವುದಾಗಿ ಹೇಳಿದ್ದರು. ಆದರೆ ಏರಿ ಸರಿಮಾಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT
ಹಿರೀಸಾವೆ ದೊಡ್ಡ ಕೆರೆ ಮಳೆ ನೀರಿನಿಂದ ಸಂಪೂರ್ಣವಾಗಿ ಭರ್ತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.