
ಬಾಗೂರು (ನುಗ್ಗೇಹಳ್ಳಿ ): ಕೃಷಿಯಲ್ಲಿ ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ರೈತರು ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿಯ ಕಲ್ಲೇ ಸೋಮನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕೃಷಿ ಇಲಾಖೆ ಹಾಗೂ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ನೈಸರ್ಗಿಕ ಕೃಷಿ ತರಬೇತಿ ಅರಿವು ಮೂಡಿಸುವ ಕಾರ್ಯಕ್ರಮ ರಾಗಿ ಬೆಳೆ ಪ್ರಾತ್ಯಕ್ಷತೆಯ ಕ್ಷೇತ್ರೋತ್ಸವ ಮತ್ತು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆ ಅಭಿಯಾನದ ಅಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ಕಲ್ಲೇ ಸೋಮನಹಳ್ಳಿ ಮತ್ತು ಕೆ ಸಿದ್ದರಟ್ಟಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿ ಮಣ್ಣು ಪರೀಕ್ಷೆ ಮಾಡುವ ಮೂಲಕ ಹಾಗೂ ಗ್ರಾಮದ 120 ಫಲಾನುಭವಿ ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್ ಹಾಗೂ ಸಾವಯವ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿ ಫಲಾನುಭವಿಗೂ 4000 ಸಾವಿರ ಪ್ರೋತ್ಸಾಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಹಾಕಲಾಗುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಕೃಷಿ ಇಲಾಖೆಯ ಮೂಲಕ ಜಾರಿಗೆ ತಂದಿದೆ ತಾಲೂಕಿನಲ್ಲಿ ಸುಮಾರು 750 ರೈತರನ್ನು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿಕೊಂಡಿದ್ದು ಮೂರು ದಿನಗಳಲ್ಲಿ ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಗ್ರಾಮಗಳ ರೈತರಿಗೆ ಯೋಜನೆ ವತಿಯಿಂದ ಸೌಲಭ್ಯ ಸಿಗಲಿದೆ ಎಂದರು.
ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ಸ್ಪಿಂಕ್ಲರ್ ಸೆಟ್ ಈ ಹಿಂದೆ 4200 ರೈತರು ಪಾವತಿಸಬೇಕಾಗಿತ್ತು ಈಗ ಜಿಎಸ್‌ಟಿ ಕಡಿಮೆಯಾಗಿರುವುದರಿಂದ 2660 ರೂ ಗಳಿಗೆ ಇಳಿಕೆಯಾಗಿದೆ ಇದರಿಂದ ರೈತರಿಗೆ ಸುಮಾರು1500 ರೂ ಉಳಿಯಲಿದೆ ಕೃಷಿ ಇಲಾಖೆ ವತಿಯಿಂದ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿ ಜೀರ್ಣೋದ್ಧಾರ ಗೊಂಡಿರುವ ಬಸವೇಶ್ವರ ದೇವಾಲಯದ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವಾಲಯದ ಅಕ್ಕಪಕ್ಕದ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನ ಒದಗಿಸಿದ್ದು ಸದ್ಯದಲ್ಲೇ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಗ್ರಾಮದ ಮೇಲ್ಭಾಗದ ಕಟ್ಟೆ ತುಂಬಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸಿಂಕ್ಲರ್ ಸೆಟ್ ಪಿವಿಸಿ ಪೈಪ್‌ಗಳನ್ನು ನೀಡಲಾಗುತ್ತಿದೆ ರೈತರು ರಾಸಾಯನಿಕ ಕೃಷಿ ಪದ್ಧತಿಗೆ ಹೆಚ್ಚಿನ ಹೊತ್ತು ನೀಡುವುದರ ಬದಲು ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೈಸರ್ಗಿಕ ಕೃಷಿಗೆ ಹೆಚ್ಚು ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್ ಶಿವಣ್ಣ ಮಾತನಾಡಿದರು.
ಮಣ್ಣು ಪರೀಕ್ಷೆ ವಿಜ್ಞಾನಿ ಡಾ. ರಾಜೇಶ್, ಹೋಬಳಿ ಕೃಷಿ ಅಧಿಕಾರಿ ರಕ್ಷಿತ್ ಎಚ್ಎಸ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಓಬಳಾಪುರ ಬಸವರಾಜ್, , ಗ್ರಾ ಪಂ ಸದಸ್ಯ ಭಾರತೀಶ್, ಮಹಾಲಿಂಗೇಗೌಡ , ಮುಖಂಡರಾದ ವಿಎನ್ ಮಂಜುನಾಥ್, ತಮ್ಮಯಣ್ಣ, ಹುಲಿಕೆರೆ ಸಂಪತ್ ಕುಮಾರ್, ಶೇಷೇ ಗೌಡ್ರು, ರಂಗೇಗೌಡ, ಲಕ್ಷ್ಮಿ ಗೌಡ, ಹೊನ್ನೇಗೌಡ, ಸಾವಿತ್ರಮ್ಮ, ಚಂದ್ರಣ್ಣ, ಸೇರಿದಂತೆ ಇತರರು ಹಾಜರಿದ್ದರು.