ADVERTISEMENT

950 ರೈತರಿಗೆ ಶೂನ್ಯ ಬಡ್ಡಿದರದ ಸಾಲ ವಿತರಣೆ: ಶಾಸಕ ಸಿ.ಎನ್‌. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:28 IST
Last Updated 15 ಜೂನ್ 2025, 15:28 IST
ಶ್ರವಣಬೆಳಗೊಳ ಹೋಬಳಿಯ ಕಾಂತರಾಜಪುರದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಕಟ್ಟಡದ ಉದ್ಘಾಟಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು
ಶ್ರವಣಬೆಳಗೊಳ ಹೋಬಳಿಯ ಕಾಂತರಾಜಪುರದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಕಟ್ಟಡದ ಉದ್ಘಾಟಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು   

ಶ್ರವಣಬೆಳಗೊಳ: ‘ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ 950 ರೈತರಿಗೆ ₹7.16 ಕೋಟಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ. ಹೈನುಗಾರಿಕೆಗೂ ₹22 ಲಕ್ಷ ಸಾಲ ಒದಗಿಸಿದೆ’ ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ಹೇಳಿದರು.

ಹೋಬಳಿಯ ಕಾಂತರಾಜಪುರದಲ್ಲಿ ಭಾನುವಾರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕ್‌ಗಳು ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಸ್ವಂತ ಬಂಡವಾಳ ಸೃಷ್ಟಿಸುವತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

‘ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ₹7.16 ಕೋಟಿ ಅನ್ನು ಸಹಕಾರ ಸಂಘಗಳಿಗೆ ಸಾಲ ವಿತರಿಸಲು ಒದಗಿಸಲಾಗಿದೆ. ರಾಜ್ಯ ಸರ್ಕಾರವೂ ಹೆಚ್ಚಿನ ಒತ್ತಡ ಹಾಕಿ ನಬಾರ್ಡ್‌ನಿಂದ ಹೆಚ್ಚುವರಿ ಆರ್ಥಿಕ ನೆರವು ಬರುವಂತೆ ಕೆಲಸ ಮಾಡಬೇಕು. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಮತ್ತು ಸಹಕಾರ ಸಚಿವರ ಗಮನಕ್ಕೆ ತರುವುದಾಗಿ’ ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಮಂಜಪ್ಪ, ನಿರ್ದೇಶಕರಾದ ಶ್ರೀರಂಗ, ನಟೇಶ್, ಗುರು, ಸುರೇಶ್, ಬಸವರಾಜು, ಧರ್ಮರಾಜು, ಶಿವಯ್ಯ, ಜಯಲಕ್ಷ್ಮಿ ಚಂದ್ರೇಗೌಡ, ನಾಗಮ್ಮ, ಯದುಕುಮಾರ್ ನಾಯಕ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಫ್ತಾಬಾ ಪಾಷಾ, ರತ್ನಮ್ಮ ದೇವರಾಜು, ಉಪಾಧ್ಯಕ್ಷೆ ಮಮತಾ ರಾಣಿ, ಸದಸ್ಯರಾದ ಕಾರ್ತಿಕ್, ಅಮೃತಾ, ಶಿಲ್ಪಾ ಶಿವರಾಜು, ಮಮತಾ ರಾಜೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಸವಿತಾ ಕ್ಷೇತ್ರಪಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ, ಮೇಲ್ವಿಚಾರಕರಾದ ಅಭಿಲಾಷ್, ಮಧು, ಮುಖಂಡರಾದ ರಾಜಣ್ಣ, ಚಂದ್ರಹಾಸ, ಸಾಗರ್‌ಗೌಡ, ನಾಗರಾಜು, ಪ್ರವೀಣ್, ರಾಮಚಂದ್ರ ಪಾಲ್ಗೊಂಡಿದ್ದರು.

ಸಹಕಾರಿ ಕ್ಷೇತ್ರ ಬೆಳೆದರೆ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ. ಒಂದು ವೇಳೆ ಕುಂಠಿತವಾದರೆ ರೈತರಿಗೇ ನಷ್ಟ. ರೈತರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ
ಸಿ.ಎನ್‌. ಬಾಲಕೃಷ್ಣ ಶಾಸಕ
ಮನೆ ನೀಡಿದ ರಾಜ್ಯ ಸರ್ಕಾರ
‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅನುದಾನದ ಕೊರತೆಯಿಂದಾಗಿ ಒಂದೂ ಜನತಾ ಮನೆಯನ್ನು ಮಂಜೂರಾತಿ ಮಾಡಿಲ್ಲ’ ಎಂದು ಶಾಸಕ ಬಾಲಕೃಷ್ಣ ಹೇಳಿದರು. ‘ಪ್ರಗತಿ ಪಥದ ಯೋಜನೆಯಡಿ ಹಾಳಾಗಿರುವ ಜಿನ್ನೇನಹಳ್ಳಿ ದೇವರ ಹಳ್ಳಿಯ 2 ಕಿ.ಮೀ. ರಸ್ತೆಯನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಲಾಗುವುದು. ಕಾಂತರಾಜಪುರ ಸಂಪರ್ಕಿಸುವ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿನ ಸಮುದಾಯ ಭವನಕ್ಕೆ ₹20 ಲಕ್ಷ ಒದಗಿಸುವುದಾಗಿ’ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.