ADVERTISEMENT

ಪರಿನಿರ್ವಾಣ ದಿನ ಆಚರಿಸದ ಪೊಲೀಸ್ ಸಿಬ್ಬಂದಿ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:38 IST
Last Updated 7 ಡಿಸೆಂಬರ್ 2025, 4:38 IST
ಸವಣೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು
ಸವಣೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು   

ಸವಣೂರು: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸದೇ ನಿರ್ಲಕ್ಷ್ಯ ತೋರಿದ ಪೊಲೀಸ್ ಇಲಾಖೆ ಮೇಲೆ ದಲಿತ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಗೆ ತೆರಳಿದ ದಲಿತ ಮುಖಂಡರು, ಪಿ.ಐ ದೇವಾನಂದ ಅವರನ್ನು ತರಾಟೆಗೆ ತೆಗೆದುಕೊಂಡು, ಪೊಲೀಸ್ ಇಲಾಖೆ ಸಂವಿಧಾನ ಶಿಲ್ಪಿಯ ನೆನಪು ದಿನ ನಿರ್ಲಕ್ಷಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡರನ್ನು ಸಮಾಧಾನ ಪಡಿಸಿದ ಪಿ.ಐ ದೇವಾನಂದ, ರಾತ್ರಿ ಪಾಳಿಯಲ್ಲಿದ್ದೆ. ಆದ್ದರಿಂದ ಠಾಣೆಗೆ ಬರುವುದು ವಿಳಂಬವಾಯಿತು. ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂಬರುವ ದಿನಗಳಲ್ಲಿ ಈ ರೀತಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವ ಭರವಸೆ ನೀಡಿದ ಬಳಿಕ ದಲಿತ ಮುಖಂಡರು, ಈ ತಪ್ಪು ಪುನರಾವರ್ತನೆಗೊಂಡರೆ, ಠಾಣೆಯ ಎದುರು ಹಲಗೆ ಹೊಡೆಯುವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಠಾಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.  ಮುಖಂಡರಾದ ಲಕ್ಷ್ಮಣ ಕನವಳ್ಳಿ, ಪ್ರವೀಣ ಬಾಲೆಹೊಸೂರ, ರಂಗಪ್ಪ ಮೈಲೆಮ್ಮನವರ, ರಾಮಣ್ಣ ಅಗಸರ, ಮಲ್ಲೇಶ ಹರಿಜನ, ಪರಮೇಶ ಮಲ್ಲಮ್ಮನವರ ಇದ್ದರು.

ADVERTISEMENT