ADVERTISEMENT

ಹೆದ್ದಾರಿಯಲ್ಲಿ ವಾಹನ ತಡೆದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:38 IST
Last Updated 7 ಡಿಸೆಂಬರ್ 2025, 4:38 IST
<div class="paragraphs"><p>ರಟ್ಟೀಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಟ್ರ್ಯಾಕ್ಟರ್‌ಗಳ ಸಮೇತ ಶನಿವಾರ ಪ್ರತಿಭಟನೆ ನಡೆಸಿದರು</p></div>

ರಟ್ಟೀಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಟ್ರ್ಯಾಕ್ಟರ್‌ಗಳ ಸಮೇತ ಶನಿವಾರ ಪ್ರತಿಭಟನೆ ನಡೆಸಿದರು

   

ರಟ್ಟೀಹಳ್ಳಿ: ‘ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ಹಾಗೂ ಮಾಸೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳದರ್ಜೆಗೆ ಇಳಿಸಲಾಗುತ್ತಿದ್ದು, ಸ್ಥಳೀಯ ಜನರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಹಾಲಕ್ಷ್ಮಿ ವೃತ್ತದಲ್ಲಿ ಬೆಳಿಗ್ಗೆ ಸೇರಿದ್ದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೂ ಮುನ್ನ ಮೆರವಣಿಗೆ ನಡೆಸಿ, ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ನಂತರ, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ADVERTISEMENT

‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು. ರೈತರು ಬೆಳೆದ ಎಲ್ಲ ಮೆಕ್ಕೆಜೋಳ ಖರೀದಿಸಬೇಕು’ ಎಂದು ಆಗ್ರಹಿಸಿ ರೈತರು ಟ್ರ್ಯಾಕ್ಟರ್‌ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳದಲ್ಲಿ ಟ್ರ್ಯಾಕ್ಟರ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ತರಳುಬಾಳು ಶಾಲೆಯಿಂದ ಹೊರಟಿದ್ದ ಪ್ರತಿಭಟನಾ ಮೆರವಣಿಗೆ, ಭಗತಸಿಂಗ್‌ ವೃತ್ತದ ಮಾರ್ಗವಾಗಿ ಬಸ್ ನಿಲ್ದಾಣ ವೃತ್ತಕ್ಕೆ ಬಂದಾಗ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆಯಲಾಯಿತು. 

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಮಾತನಾಡಿ, ‘ರಟ್ಟೀಹಳ್ಳಿ, ಮಾಸೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಆದರೆ, ಇಂದಿನ ರಾಜ್ಯ ಸರ್ಕಾರ ಅವುಗಳನ್ನು ಕೆಳದರ್ಜೆಗೆ ಇಳಿಸಲು ಆದೇಶಿಸಿದೆ. ಈ ತಾಲ್ಲೂಕಿನ ಜನತೆಗೆ ಸರ್ಕಾರ ಎಸಗುತ್ತಿರುವ ಅನ್ಯಾಯ ಇದಾಗಿದೆ’ ಎಂದರು.

‘ಬಿಜೆಪಿ ಸರ್ಕಾರವಿದ್ದಾಗ ಅಕ್ರಮ, ಸಕ್ರಮ ಯೋಜನೆಯಡಿ ರೈತರಿಗೆ ಟಿ.ಸಿ. ನೀಡುವಂತೆ ಸೂಚಿಸಲಾಗಿತ್ತು. ಆದರೆ, ಈಗ ಹೆಸ್ಕಾಂ ಅಧಿಕಾರಿಗಳು ರೈತರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಇಸ್ಪೀಟು, ಜೂಜು, ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿದ್ದಾರೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

‘ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಅಕ್ರಮಗಳನ್ನು ತಡೆಯಬೇಕು. ರೈತರು ಬೆಳೆದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ, ಬೆಳೆದಿರುವ ಎಲ್ಲ ಮೆಕ್ಕೆಜೋಳವನ್ನು ಖರೀದಿಸಬೇಕು. ಇದು ಮೊದಲ ಹಂತದ ಹೋರಾಟ. ಬೇಡಿಕೆ ಈಡೇರದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಮುಖಂಡರಾದ ಎನ್.ಎಂ. ಈಟೇರ, ಡಿ.ಎಂ. ಸಾಲಿ, ಸೃಷ್ಠಿ ಪಾಟೀಲ, ದೇವರಾಜ ನಾಗಣ್ಣನವರ, ಸಂಜೀವಯ್ಯ ಕಬ್ಬಿಣಕಂತಿಮಠ, ಸಂದೀಪ ಪಾಟೀಲ, ಪಾಲಾಕ್ಷಗೌಡ ಪಾಟೀಲ, ಆರ್.ಎನ್. ಗಂಗೋಳ, ಮಾಲತೇಶ ಗಂಗೋಳ. ಆನಂದಪ್ಪ ಹಾದಿಮನಿ, ಶಂಭಣ್ಣ ಗೂಳಪ್ಪನವರ, ಹನುಮಂತಪ್ಪ ಗಾಜೇರ, ರಾಘವೇಂದ್ರ ಹರವಿಶೆಟ್ಟರ, ಪ್ರಶಾಂತ ದ್ಯಾವಕ್ಕಳವರ, ರವಿ ಹದಡೇರ, ಬಸವರಾಜ ಕಟ್ಟೀಮನಿ. ಬಸವರಾಜ ಆಡಿನವರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.