ADVERTISEMENT

ಕನಿಷ್ಠ ಅಂತ್ಯಸಂಸ್ಕಾರಕ್ಕಾದರೂ ಜಾಗ ನೀಡಿ: ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 3:09 IST
Last Updated 12 ನವೆಂಬರ್ 2025, 3:09 IST
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮನೆ ಮತ್ತು ನಿವೇಶನ ರಹಿತ ದಲಿತ ಸಮುದಾಯದ ಜನರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರಿಗೆ ಮನವಿ ಸಲ್ಲಿಸಿದರು.
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮನೆ ಮತ್ತು ನಿವೇಶನ ರಹಿತ ದಲಿತ ಸಮುದಾಯದ ಜನರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರಿಗೆ ಮನವಿ ಸಲ್ಲಿಸಿದರು.   

ಶಿಗ್ಗಾವಿ: ಮನೆ ಮತ್ತು ನಿವೇಶನ ರಹಿತ ದಲಿತ ಸಮುದಾಯದ ಜನರಿಗೆ ಮನೆ ಮತ್ತು ನಿವೇಶನ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರಿಗೆ ಮನವಿ ಸಲ್ಲಿಸಿದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಶತಮಾನಗಳಿಂದ ಸಮಾಜದಲ್ಲಿ ಶೋಷಣೆ ಅನುಭವಿಸಿದ ದಲಿತ ಸಮುದಾಯಕ್ಕೆ ಕನಿಷ್ಠ ಘನತೆಯ ಬದುಕು ನಡೆಸಲು ವಸತಿ, ನಿವೇಶನ ಕೊನೆಗೆ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ದಲಿತ ಸಮುದಾಯದಲ್ಲಿರುವ ಭೂ ಹಿಡುವಳಿದಾರರಿಗೆ ಗಂಗಾ ಕಲ್ಯಾಣ ಕೊಳವೆ ಬಾವಿ ಸೌಕರ್ಯ ಹಾಗೂ ದಲಿತ ಸಮುದಾಯದವರಿಗೆ ಸ್ಮಶಾನ ಇರದ ಎಲ್ಲ ಗ್ರಾಮದಲ್ಲಿಯೂ ಸ್ಮಶಾನ ಭೂಮಿ ಒದಗಿಸಲು ಮತ್ತು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳು ಅನುಭವಿಸಿರುವ ಸಾಮಾಜಿಕ ತಾರತಮ್ಯ, ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಶೇ 75ರಷ್ಟು ಜನರು ಇಂದಿಗೂ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವುದನ್ನು ಗುರುತಿಸಲಾಗಿದೆ. ಅಸ್ಪೃಶ್ಯತೆ ಆಚರಣೆಗಳಲ್ಲಿ ದೇವಾಲಯಗಳ ಪ್ರವೇಶದ ನಿಷೇಧ, ಸಾಮೂಹಿಕ ಆಹಾರ ಸೇವನೆಯಲ್ಲಿ ನಿಷೇಧ, ಪಂಕ್ತಿಬೇಧ, ಪ್ರತ್ಯೇಕ ಟೀ ಲೋಟ ನೀಡುವುದು. ಪ್ರತ್ಯೇಕ ಆಸನ ವ್ಯವಸ್ಥೆ, ಮನೆಗಳಿಗೆ ಪ್ರವೇಶ ನಿಷೇಧ, ರಸ್ತೆಗಳ ಬಳಕೆಗೆ ನಿಷೇಧ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ. ಶಾಲೆಗಳಲ್ಲಿ ತಾರತಮ್ಯ, ಜೀತ ಪದ್ಧತಿ ಆಚರಣೆ, ಬಲತ್ಕಾರ ಮತ್ತು ದೌರ್ಜನ್ಯಗಳ ಹೆಸರಿನಲ್ಲಿ ತಾರತಮ್ಯಗಳು, ಜೊತೆಗೆ ಮೇಲ್ಟಾತಿಯ ಅಧಿಕಾರಿಗಳು ದಲಿತರಿಗೆ ಸಿಗಬೇಕಾದ ಸೌಕರ್ಯಗಳನ್ನು ನಿರಾಕರಿಸುವುದು ಸೇರಿದಂತೆ ಅನೇಕ ರೀತಿಯ ಅಸ್ಪೃಶ್ಯತೆ ಮತ್ತು ತಾರತಮ್ಯ ಆಚರಣೆಗಳನ್ನು ಸಂಪೂರ್ಣ ತಡೆಯಬೇಕು ಎಂದು ಆಗ್ರಹಿಸಿದರು.

ಜನರು ಇಂದಿಗೂ ಸಹ ಕಲಬುರ್ಗಾ ತಾಲ್ಲೂಕಿನ ಸಂಗನಾಳದಲ್ಲಿ ದಲಿತ ಯುವಕ ಕೂದಲು ಕಟ್ ಮಾಡಿ ಎಂದಿದಕ್ಕೆ ಅಸ್ಪೃಶ್ಯರಿಗೆ ಮಾಡುವುದಿಲ್ಲ ಎಂದು ವಾದ ನಡೆದು ದಲಿತ ಯುವಕನ ಕೊಲೆಯಾಗಿದೆ. ದಲಿತ ಮಹಿಳೆಯರು ದುಪ್ಪಟ್ಟು ದೌರ್ಜನ್ಯ, ಅಪಮಾನ ಮತ್ತು ಲಿಂಗ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ದೇವದಾಸಿ ಪದ್ಧತಿ ಈಗಲೂ ಮುಂದುವರೆದಿದೆ. ದೇವದಾಸಿ ಸಮೀಕ್ಷೆಯನ್ನು ನಿಖರವಾಗಿ ನಡೆಸಲು ಆಗ್ರಹಿಸಿದರು.

ಡಿಎಚ್ಎಸ್ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ ಮಾತನಾಡಿ, ದಲಿತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿ (ಡಿ.ಸಿ. ಭೂಮಿ), ಬಗರ್ ಹುಕ್ಕುಂ ಭೂಮಿಗೆ ಮಂಜೂರಾತಿ ನೀಡಬೇಕು. ಸರ್ಕಾರಿ ಭೂಮಿ, ಗೋಮಾಳ, ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಸಾಗುವಳಿ ಮಾಡುತ್ತಿರುವ ಪಡ ಭೂಮಿಯನ್ನು ಸಕ್ರಮಗೊಳಿಸಬೇಕು. ಗಂಗಾ ಕಲ್ಯಾಣ ಕೊಳವೆಬಾವಿಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿದಾರರಿಗೂ ಜೇಷ್ಠತಾ ಪಟ್ಟಿ ಆಧಾರದಲ್ಲಿ ಏಕ ಕಾಲಕ್ಕೆ ಮಂಜೂರು ಮಾಡಿ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.

ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್, ಅರುಣ ನಾಗವತ್, ಡಿಎಚ್ಎಸ್ ಜಿಲ್ಲಾ ಮುಖಂಡರಾದ ಮಂಜುಳಾ ಹಾನಗಲ್, ಕೃಷ್ಣಪ್ಪ ಗದಗ, ಕಿಶೋರ್ ಧೋತ್ರರೆ, ಕಸ್ತೂರಿ ವಡ್ಟರ, ಮಂಜುಳಾ ತಡಸ, ಮಕಬುಲ್ ಅಹಮದ್, ಸಂಗೀತಾ ಬಗರಿಕಾರ್, ಹನಮಂತಪ್ಪ ವಾಲಗದ, ಗುತ್ತೆಮ್ಮ, ರೇಣುಕಾ ಕಾಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.