ADVERTISEMENT

ಹಾವೇರಿ | ಬಿಜೆಪಿ ಪ್ರತಿಭಟನೆ: ಕೋರಿಶೆಟ್ಟರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:59 IST
Last Updated 24 ಸೆಪ್ಟೆಂಬರ್ 2025, 5:59 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಹಾವೇರಿ: ‘ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇದನ್ನು ಮುಚ್ಚುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸೆ. 24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ತಿಳಿಸಿದ್ದಾರೆ.

‘ಜೆ.ಎಚ್. ಪಟೇಲ್ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ವಿನಂತಿಸಿದ್ದಾರೆ.

ADVERTISEMENT

ಇದಕ್ಕೆ ಪ್ರತಿಯಾಗಿ ಗವಿಸಿದ್ದಪ್ಪ ಅವರಿಗೆ ಪತ್ರ ಬರೆದಿರುವ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ‘ಬಿಜೆಪಿ ಬೆಂಬಲದಿಂದ ಶಶಿಕಲಾ ಮಾಳಗಿ ಅವರು ಹಾವೇರಿ ನಗರಸಭೆ ಅಧ್ಯಕ್ಷರಾಗಿದ್ದಾರೆ. ಪ್ರತಿಭಟನೆ ಮಾಡಿದರೆ, ಅವರ ವಿರುದ್ಧವೇ ಚಳವಳಿ ಮಾಡಿದಂತಾಗುತ್ತದೆ. ಅದರ ಬದಲು ಪಕ್ಷದ ನಾಯಕರಾದ ಸಂಸದ ಬಸವರಾಜ ಬೊಮ್ಮಾಯಿ ಮೂಲಕ ಕೇಂದ್ರ ಸರ್ಕಾರದಿಂದ ಹಣ ತಂದು ನಗರವನ್ನು ಅಭಿವೃದ್ಧಿಪಡಿಸಿ’ ಎಂದು ತಿರುಗೇಟು ನೀಡಿದ್ದಾರೆ.

‘ಬಿಜೆಪಿಯವರು ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದು ಹಾಗೂ ಕಾಂಗ್ರೆಸ್‌ನವರು ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದರಲ್ಲಿಯೇ ಕಾಲಹರಣವಾಗುತ್ತಿದೆ. ಜನರಿಗೆ ಮೂಲ ಸೌಕರ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಎರಡು ನದಿಗಳಿದ್ದರೂ ನಗರದಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇರದಿರುವುದು ವಿಷಾದನೀಯ’ ಎಂದು ಕೋರಿಶೆಟ್ಟರ ಬೇಸರ ಹೊರಹಾಕಿದ್ದಾರೆ.

‘ನೂರಾರು ಕೋಟಿ ಖರ್ಚು ಮಾಡಿದರೂ ಜನರಿಗೆ ಕುಡಿಯುವ ನೀರು ಕೊಡಲು ಆಗಿಲ್ಲ. ಎರಡು ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿರಂತರ ಕುಡಿಯುವ ನೀರು ಯೋಜನೆ ನಿಷ್ಪ್ರಯೋಜಕವಾಗಿದ್ದು, ಇದಕ್ಕೆ ಹೊಣೆ ಯಾರು ? ಸುಖಾಸುಮ್ಮನೇ ಬೀದಿಗೆ ಇಳಿದು ಚಳವಳಿ ಮಾಡುವ ಬದಲು ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿಪಡಿಸಿ ನಿಮ್ಮ ಹೆಸರು ಉಸಿಕೊಳ್ಳಿ’ ಎಂದು ಗವಿಸಿದ್ದಪ್ಪ ಅವರಿಗೆ ಕೋರಿಶೆಟ್ಟರ ಖಡಕ್ ಸಂದೇಶ ನೀಡಿದ್ದಾರೆ.

₹10 ಲಕ್ಷ ಟೆಂಡರ್

‘ಹಾವೇರಿ ನಗರದ ರಸ್ತೆಗಳಲ್ಲಿ ಹೆಚ್ಚಾಗಿರುವ ಗುಂಡಿಗಳನ್ನು ಮುಚ್ಚಲು ಹಾಗೂ ಡಾಂಬರೀಕರಣ ಮಾಡಲು ₹ 10 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಸದ್ಯ ಮಳೆ ಇರುವ ಕಾರಣಕ್ಕೆ ಗುಂಡಿ ಮುಚ್ಚಲು ಗುತ್ತಿಗೆದಾರ ವಿಳಂಬ ಮಾಡುತ್ತಿದ್ದಾರೆ. ಮಳೆ ಕಡಿಮೆಯಾದ ನಂತರ ಗುಂಡಿ ಮುಚ್ಚುವ ಕೆಲಸವಾಗಲಿದೆ’ ಎಂದು ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.