
ಹಾವೇರಿ/ಗದಗ: ‘ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಖರೀದಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಹಾವೇರಿಯಲ್ಲಿ ಎಂಟನೇ ದಿನಕ್ಕೆ, ಗದಗನಲ್ಲಿ ಹದಿನೇಳನೇ ದಿನಕ್ಕೆ ಕಾಲಿರಿಸಿತು.
‘ಪ್ರತಿ ರೈತರಿಂದ ಗರಿಷ್ಠ 5 ಕ್ವಿಂಟಲ್ ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ ₹ 2,400 ಬೆಂಬಲ ಬೆಲೆಯಡಿ ಖರೀದಿಸಬೇಕು’ ಎಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪ್ರತಿಗಳನ್ನು ರೈತರು ಸುಟ್ಟು ಪ್ರತಿಭಟಿಸಿದರು. ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್‌ಗೆ ₹ 3,000 ದರದಲ್ಲಿ ಖರೀದಿಸಬೇಕು. ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ರೈತರು ಆಗ್ರಹಿಸಿದರು.
‘ಹಾವೇರಿ ಜಿಲ್ಲೆಯಲ್ಲಿ ಅಂದಾಜು 11 ಲಕ್ಷಕ್ಕೂ ಹೆಚ್ಚು ಕ್ವಿಂಟಲ್ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಆದೇಶದಿಂದ ಪ್ರಯೋಜನವಾಗದು’ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರೈತರು ಟಯರ್‌ಗಳಿಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದರು. ಖರೀದಿ ಕೇಂದ್ರ ಆರಂಭಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಎಚ್ಚರಿಸಿದರು.
ಖರೀದಿ ಕೇಂದ್ರ ಆರಂಭಿಸುವ ಭರವಸೆ ಸಿಕ್ಕಿದ್ದ ಕಾರಣ, ರೈತರು ಧರಣಿ ಸ್ಥಳದಲ್ಲಿ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದರು. ಆದರೆ, ಖರೀದಿ ಕೇಂದ್ರ ಆರಂಭಗೊಳ್ಳದ ಕಾರಣ ಪಾಲಾ-ಬಾದಾಮಿ ಹೆದ್ದಾರಿಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.