ಹಾವೇರಿ: ‘ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಕಡಿಮೆ ಅವಧಿಯಲ್ಲಿ ಲಭ್ಯವಿರುವ ಸೌಕರ್ಯ ಬಳಸಿಕೊಂಡು ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಆದರೆ, ಉಪನ್ಯಾಸಕರು ಸೇರಿದಂತೆ 161 ಗ್ರೂಪ್– ಎ ಹುದ್ದೆಗಳು ಖಾಲಿಯಿವೆ. ಅರ್ಜಿ ಕರೆದರೂ ಹಾವೇರಿಗೆ ಬರಲು ಅರ್ಹರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ. ಪ್ರದೀಪಕುಮಾರ್ ಎಂ.ವಿ. ಹೇಳಿದರು.
ನಗರದ ದೇವಗಿರಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ‘ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಸಂಸ್ಥೆಯ ಪ್ರಗತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರು.
‘ಉಪನ್ಯಾಸಕರಾಗಿ ಬರುವವರು, ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ವಾಸವಿರಲು ಇಚ್ಛಿಸುತ್ತಾರೆ. ಉಪನ್ಯಾಸಕರಿಗೆ ಸಂಸ್ಥೆಯಲ್ಲಿ ನಿಗದಿಪಡಿಸಿರುವ ಸಂಬಳ ಕಡಿಮೆಯಿದೆ. ಇದೇ ಕಾರಣಕ್ಕೆ ಅರ್ಜಿ ಕರೆದರೂ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ. ಲಭ್ಯವಿರುವ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲೂ ಖಾಲಿ ಹುದ್ದೆಗಳಿವೆ’ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಶರಣ ಪ್ರಕಾಶ, ‘ವೇತನ ಹೆಚ್ಚಳಕ್ಕೆ ಅವಕಾಶವಿದ್ದರೆ ತಿಳಿಸಿ ಮಾಡೋಣ’ ಎಂದರು.
ಸಂಸದ ಬಸವರಾಜ ಬೊಮ್ಮಾಯಿ, ‘ಇದೊಂದು ಮಾದರಿ ಸಂಸ್ಥೆ. ಹಾವೇರಿ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಲ್ಲಿಂದ ಉತ್ತಮ ವೈದ್ಯರು ರೂಪಗೊಳ್ಳಬೇಕು. ಆದ್ಯತೆ ಮೇರೆಗೆ ಸಂಬಳ ಹೆಚ್ಚಿಸಿ, ಅರ್ಜಿ ಕರೆಯಿಸಿ’ ಎಂದು ಸಲಹೆ ನೀಡಿದರು.
ಉತ್ತಮ ಫಲಿತಾಂಶ: ‘ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಎಂಬಿಬಿಎಸ್‌ನ 2022–23ನೇ ಬ್ಯಾಚ್‌ನ ಹಂತ–1ರಲ್ಲಿ ಶೇ 98.65 ಹಾಗೂ ಹಂತ–2ರಲ್ಲಿ ಶೇ 99.31ರಷ್ಟು ಫಲಿತಾಂಶವಾಗಿದೆ. 2023–24ರ ಬ್ಯಾಚ್‌ನ ಹಂತ–1ರಲ್ಲಿ ಶೇ 98.65ರಷ್ಟು ಫಲಿತಾಂಶ ದಾಖಲಾಗಿದೆ’ ಎಂದು ಪ್ರದೀಪಕುಮಾರ್ ಮಾಹಿತಿ ನೀಡಿದರು.
‘ಕಾಲೇಜಿನಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಕನ್ನಡ ಗ್ರಂಥಗಳಿಗಾಗಿಯೇ ಪ್ರತ್ಯೇಕ ಗ್ರಂಥಾಲಯ ಮಾಡಲಾಗಿದೆ. ಮ್ಯೂಸಿಯಂ ಮಾಡುವ ಕೆಲಸ ಪ್ರಗತಿಯಲ್ಲಿದೆ. ಜಿಲ್ಲಾಸ್ಪತ್ರೆ ಮೂಲಕ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಬೇಕಿದೆ. ಕೆಲ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ’ ಎಂದು ಹೇಳಿದರು.
ಸಮಸ್ಯೆ ಹೇಳಿಕೊಂಡ ವಿದ್ಯಾರ್ಥಿಗಳು: ‘ಕಾಲೇಜು ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿದೆ. ಕಾಲೇಜಿನಿಂದ ಹಾವೇರಿಗೆ ಹೋಗಿ ಬರಲು ಬಸ್ ವ್ಯವಸ್ಥೆಯಿಲ್ಲ. ಆಟೊದವರನ್ನು ಕೇಳಿದರೆ ₹ 250 ಕೇಳುತ್ತಾರೆ. ಹಾಸ್ಟೆಲ್‌ಗಳಲ್ಲಿ ಊಟದ ಸಮಸ್ಯೆಯಿದೆ. ಕ್ಯಾಂಪಸ್‌ನಲ್ಲಿ ಬೀದಿನಾಯಿಗಳ ಹಾವಳಿ ಇದ್ದು, ಓಡಾಡಲು ಭಯವಿದೆ’ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು.
ಹಿಮ್ಸ್ ಆಡಳಿತ, ಶೈಕ್ಷಣಿಕ ಮಾಹಿತಿ ಹಾಗೂ ಇತರೆ ದಾಖಲೆಗಳು ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ರೂಪಿಸಿರುವ ಮೊಬೈಲ್ ಆ್ಯಪ್‌ನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಹಿಮ್ಸ್ ಪ್ರಾಂಶುಪಾಲ ಡಾ. ಅಂಶಕಿರಣ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ.ಎಲ್.ಸುಜಾತಾ ರಾಥೋಡ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಇದ್ದರು.
ವೈದ್ಯಕೀಯ ವೃತ್ತಿ ಪವಿತ್ರವಾದ್ದು. ವಿದ್ಯಾರ್ಥಿಗಳು ಸಂಸ್ಥೆಯ ಸದುಪಯೋಗ ಪಡೆದುಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿ ಉತ್ತಮ ವೈದ್ಯರಾಗಬೇಕುಡಾ. ಶರಣ ಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
Cut-off box - ಹಿಮ್ಸ್ ಹುದ್ದೆಗಳ ವಿವರಹುದ್ದೆ; ಮಂಜೂರು;ಕೆಲಸ;ಖಾಲಿಗ್ರೂಪ್ ಎ; 196;35;161ಗ್ರೂಪ್ ಬಿ; 02;02;00ಗ್ರೂಪ್ ಸಿ; 86;73;13ಗ್ರೂಪ್ ಡಿ; 10; 10; 00
‘ಜಿಲ್ಲಾಸ್ಪತ್ರೆ ನವೀಕರಣ: ಎಂಜಿನಿಯರ್‌ಗೆ ತರಾಟೆ’
ಹಾವೇರಿ ಜಿಲ್ಲಾ ಆಸ್ಪತ್ರೆ ನೆಲಮಹಡಿ ಹಾಗೂ ಮೊದಲ ಮಹಡಿ ನವೀಕರಣ ಕೆಲಸ ಪೂರ್ಣಗೊಳಿಸದಿದ್ದಕ್ಕೆ ಗರಂ ಆದ ಶರಣ ಪ್ರಕಾಶ ಪಾಟೀಲ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಕೆಲಸ ಪೂರ್ಣಗೊಂಡಿಲ್ಲ. ಆದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟವರು ಯಾರು. ನಿಮಗೆ ಕೆಲಸ ಮಾಡಿಸಲು ಬರುವುದಿಲ್ಲವೆ’ ಎಂದು ಪ್ರಶ್ನಿಸಿದರು. ಸಭೆಯಲ್ಲಿದ್ದ ಸಂಸದ ಬಸವರಾಜ ಬೊಮ್ಮಾಯಿ ‘ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.