
ಹಾವೇರಿಯ ಜೆ.ಪಿ. ವೃತ್ತದ ರಸ್ತೆ
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯ ಆಡಳಿತ ನಡೆಸುವ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಕ್ಕಟ್ಟಾಗಿದ್ದು, ಅಲ್ಲಿಗೆ ಹೋಗಿಬರುವ ಜನರು ಬೇಸತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ, ಹಾವೇರಿಯ ಜೆ.ಪಿ. ವೃತ್ತದಿಂದ ದೇವಗಿರಿ ಗ್ರಾಮದವರೆಗೂ ಚತುಷ್ಪಥ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವ ಜೆ.ಪಿ.ವೃತ್ತದಿಂದ, ಮುನ್ಸಿಪಲ್ ಹೈಸ್ಕೂಲ್ ಬಳಿಯ ಜೆ.ಎಚ್. ಪಟೇಲ್ ವೃತ್ತದ ಮೂಲಕ ಇಜಾರಿ ಲಕಮಾಪುರ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ದೇವಗಿರಿ ಗ್ರಾಮದವರೆಗೂ 7.50 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ₹51.20 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ.
ರಸ್ತೆಯ ಸಮೀಕ್ಷೆ ನಡೆಸಿರುವ ಧಾರವಾಡದ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ (ಉತ್ತರ) ಮುಖ್ಯ ಎಂಜಿನಿಯರ್, ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಜೂನ್ 27ರಂದೇ ಪತ್ರ ಬರೆದಿದ್ದಾರೆ.
‘2025–26ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿ ಜಿಲ್ಲಾ ಮುಖ್ಯರಸ್ತೆ ಸುಧಾರಣೆ ಅಡಿ ಹಾವೇರಿ ಜೆ.ಪಿ.ವೃತ್ತದಿಂದ ದೇವಗಿರಿವರೆಗಿನ 7.50 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುದಾನದೊಂದಿಗೆ ಅನುಮೋದನೆ ದೊರಕಿಸಿಕೊಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಪತ್ರದ ಕಡತ, ಹಣಕಾಸು ಇಲಾಖೆಯ ಅನುಮತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಿದೆ. ಮುಖ್ಯಮಂತ್ರಿ ಅವರು ಸಹಿ ಹಾಕಿದ ನಂತರ, ರಸ್ತೆ ನಿರ್ಮಾಣ ಕೆಲಸಗಳು ಆರಂಭವಾಗಲಿವೆ. ಸಹಿ ಸಂಬಂಧ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹಾಗೂ ಹಲವು ಮುಖಂಡರು, ಸಿದ್ದರಾಮಯ್ಯ ಅವರನ್ನು ಈಗಾಗಲೇ ಒಂದು ಬಾರಿ ಭೇಟಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಭೇಟಿಯಾಗಲು ಸಮಯ ಪಡೆದುಕೊಂಡಿದ್ದಾರೆ.
‘ಹಾವೇರಿಯ ಜೆ.ಪಿ. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ದೇವಗಿರಿಯವರೆಗೂ ಚತುಷ್ಪಥ ರಸ್ತೆ ನಿರ್ಮಾಣದ ಕೆಲಸ ಶುರುವಾಗಿದೆ. ಸಮೀಕ್ಷೆ ಮುಗಿದು, ಸರ್ಕಾರಕ್ಕೂ ಪ್ರಸ್ತಾವ ಹೋಗಿದೆ. ಮುಖ್ಯಮಂತ್ರಿ ಸಹಿಯೊಂದೇ ಬಾಕಿಯಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತೇವೆ’ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಹೇಳಿದರು.
ಮಾಲೀಕರಲ್ಲಿ ಆತಂಕ: ನಗರದ ಹೃದಯ ಭಾಗದಲ್ಲಿರುವ ಜೆ.ಪಿ. ವೃತ್ತದಿಂದ ದೇವಗಿರಿಯವರೆಗೂ ಇಕ್ಕಟ್ಟಾದ ರಸ್ತೆ ಇದೆ. ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು ಹಲವು ಜಾಗ ಹಾಗೂ ಕಟ್ಟಡಗಳ ಸ್ವಾಧೀನ ಅನಿವಾರ್ಯ. ಹಲವು ವರ್ಷಗಳಿಂದ ಜಾಗ– ಕಟ್ಟಡ ಇಟ್ಟುಕೊಂಡು ವಾಸ, ವಾಣಿಜ್ಯ ಚಟುವಟಿಕೆಗೆ ಬಳಸುತ್ತಿದ್ದ ಮಾಲೀಕರಲ್ಲಿ ಇದೀಗ ಆತಂಕ ಶುರುವಾಗಿದೆ.
ಈ ರಸ್ತೆ ಕೆಲವು ಕಡೆಗಳಲ್ಲಿ 14 ಮೀಟರ್ ವಿಸ್ತೀರ್ಣವಿದೆ. ಇತರೆ ಕಡೆಯಲ್ಲಿ 15 ಮೀಟರ್ ಹಾಗೂ 16 ಮೀಟರ್ ರಸ್ತೆಯಿದೆ. ಎಲ್ಲಿಯೂ ಸಮ ಪ್ರಮಾಣದ ರಸ್ತೆಯಿಲ್ಲ. ಪದೇ ಪದೆ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಅಪಘಾತಗಳೂ ಸಂಭವಿಸುತ್ತಿದೆ. ಇದೇ ರಸ್ತೆ ಮಾರ್ಗವಾಗಿ ಸರ್ಕಾರಿ ಎಂಜಿನಿಯರ್ ಕಾಲೇಜು, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ಜಿಲ್ಲಾಧಿಕಾರಿ ಕಚೇರಿ, ಶಾಲೆ–ಕಾಲೇಜುಗಳಿಗೆ ಹೋಗಿಬರಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 21 ಮೀಟರ್ ಚತುಷ್ಪಥ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.
‘ರಸ್ತೆಯ ಒಂದು ಬದಿ 9 ಮೀಟರ್ ಹಾಗೂ ಇನ್ನೊಂದು ಬದಿ 9 ಮೀಟರ್ ರಸ್ತೆ ಆಗಲಿದೆ. ಮಧ್ಯದಲ್ಲಿ ಒಂದು ಮೀಟರ್ ರಸ್ತೆ ವಿಭಜಕ (ವಿದ್ಯುತ್ ಕಂಬ, ಗಿಡಗಳ ಸಮೇತ) ಬರಲಿದೆ. ರಸ್ತೆಯ ಎರಡೂ ಬದಿಯಲ್ಲಿ ತಲಾ 1 ಮೀಟರ್ ಕಾಲುವೆ ಹಾಗೂ ಪಾದಚಾರಿ ಮಾರ್ಗ ಇರಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಜೆ.ಪಿ.ವೃತ್ತದಿಂದ ಇಜಾರಿ ಲಕಮಾಪುರದ ದುಂಡಿ ಬಸವೇಶ್ವರ ದೇವಸ್ಥಾನದವರೆಗೂ ಸಮ ಪ್ರಮಾಣದಲ್ಲಿ ರಸ್ತೆಯಿಲ್ಲ. ಈ ಮಾರ್ಗದಲ್ಲಿ ಜಾಗ ಹಾಗೂ ಕಟ್ಟಡಗಳ ಸ್ವಾಧೀನ ತೀರಾ ಅನಿವಾರ್ಯ’ ಎಂದು ಅಧಿಕಾರಿ ವಿವರಿಸಿದರು.
‘ಹಲವು ದೊಡ್ಡ ಕಟ್ಟಡ, ಮನೆ, ಶಾಪಿಂಗ್ ಮಾಲ್ ಹಾಗೂ ಇತರೆ ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರಷ್ಟೇ ಜಾಗವನ್ನು ಖುಲ್ಲಾ ಬಿಟ್ಟಿದ್ದಾರೆ. ಎಲ್ಲ ಜಾಗ– ಕಟ್ಟಡಗಳನ್ನು ರಸ್ತೆಯ ಅಳತೆಗೆ ತಕ್ಕಂತೆ ಗುರುತು ಮಾಡಿ ಸ್ವಾಧೀನ ಪ್ರಕ್ರಿಯೆ ನಡೆಸಲೇಬೇಕು’ ಎಂದು ಹೇಳಿದರು.
‘ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಗುತ್ತಿದ್ದಂತೆ, ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ದರ ನಿಗದಿ ಸಹ ಆಗಲಿದೆ. ಸ್ವಾಧೀನಕ್ಕೆ ಮಾಲೀಕರಿಂದ ವಿರೋಧ ಬರುವ ಸಾಧ್ಯತೆ ಇರುತ್ತದೆ. ಕೆಲವರು ನ್ಯಾಯಾಲಯಕ್ಕೂ ಹೋಗಬಹುದು’ ಎಂದು ತಿಳಿಸಿದರು.
ಹಾವೇರಿ ಅಭಿವೃದ್ಧಿ ದೃಷ್ಟಿಯಿಂದ ಜೆ.ಪಿ.ವೃತ್ತದಿಂದ ದೇವಗಿರಿಯವರೆಗೂ ಚತುಷ್ಪಥ ರಸ್ತೆಯ ಅಗತ್ಯವಿದೆ. ಇದರ ಮಂಜೂರಾತಿಗೆ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆರುದ್ರಪ್ಪ ಲಮಾಣಿ ಹಾವೇರಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.