ADVERTISEMENT

ಹಿರೇಕೆರೂರ ತಾಲ್ಲೂಕು ಆಸ್ಪತ್ರೆ: ಅಭದ್ರತೆ, ಅಸ್ವಚ್ಛತೆ

ಹಿರೇಕೆರೂರ: ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ಸಿಗದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:31 IST
Last Updated 16 ಏಪ್ರಿಲ್ 2025, 7:31 IST
ಹಿರೇಕೆರೂರಿನಲ್ಲಿ ತಾಲ್ಲೂಕು ಆಸ್ಪತೆಯ ಕಾಂಪೌಂಡ್ ಸ್ಥಿತಿ
ಹಿರೇಕೆರೂರಿನಲ್ಲಿ ತಾಲ್ಲೂಕು ಆಸ್ಪತೆಯ ಕಾಂಪೌಂಡ್ ಸ್ಥಿತಿ   

ಹಿರೇಕೆರೂರ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಭದ್ರತೆ, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆಯೂ ಸಿಗದಾಗಿದೆ.

ಆಸ್ಪತ್ರೆಯ ಕಾಂಪೌಂಡ್ ಬಿದ್ದು ವರ್ಷಗಳೇ ಕಳೆದಿದೆ. ಕಾಂಪೌಂಡ್‌ ಮರು ನಿರ್ಮಾಣಕ್ಕೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೂಕ್ತ ಭದ್ರತೆ ಇಲ್ಲದೆ ಬೀದಿ ನಾಯಿಗಳು , ಹಂದಿಗಳು ಆಸ್ಪತ್ರೆ ಆವರಣಕ್ಕೆ ನುಗ್ಗುತ್ತಿವೆ. ಆಸ್ಪತ್ರೆ ಒಳಗೆ ಮತ್ತು ಹೊರಗಿನ ಆವರಣದ ಸ್ವಚ್ಛತೆ ಕಾಪಾಡಲೂ ಕ್ರಮವಾಗಿಲ್ಲ.

ಆಸ್ಪತ್ರೆಗೆ ಪ್ರತಿದಿನ 650ರಿಂದ 700 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಒಟ್ಟು 18 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದರೂ, ಐವರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ವರು ತುರ್ತು ಚಿಕಿತ್ಸಾ ತಜ್ಞರ ಹುದ್ದೆ ಖಾಲಿ ಇದ್ದು, ನೇಮಕಾತಿಗೆ ಇಲಾಖೆ ಮುಂದಾಗಿಲ್ಲ.

ADVERTISEMENT

ಆಸ್ಪತ್ರೆಯಲ್ಲಿ ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಹೆಚ್ಚಿನ ಪರೀಕ್ಷೆಗೆ ಖಾಸಗಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ, ಕ್ಷ-ಕಿರಣ ಮತ್ತು ಔಷಧ ವಿತರಣೆಯನ್ನು ದಿನದ 24 ಗಂಟೆಯೂ ಮಾಡಬೇಕೆಂಬುದು ಜನರ ಆಗ್ರಹವಾಗಿದೆ.

‘ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಕಾರಣ ರೋಗಿಗಳಿಗೆ ಅನಾನುಕೂಲವಾಗಿದೆ, ಹೆಚ್ಚಿನ ಚಿಕಿತ್ಸೆಗೆ ಪಕ್ಕದ ತಾಲ್ಲೂಕಿನ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗೆ ತೆರಳಬೇಕಿದೆ. ಎಲ್ಲಾ ರೀತಿಯ ತಪಾಸಣೆಯನ್ನು ಆಸ್ಪತ್ರೆಯಲ್ಲೇ ಮಾಡುವ ವ್ಯವಸ್ಥೆ ಜಾರಿ ಆಗಬೇಕಿದೆ. ಕ್ಯಾಂಟೀನ್‌ ಸಹ ತೆರೆಯಬೇಕಿದೆ’ ಎಂದು ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನವೀನ್‌ ಹುಲ್ಲತ್ತಿ ಒತ್ತಾಯಿಸಿದರು.

‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ’
‘ತಾಲ್ಲೂಕು ಆಸ್ಪತ್ರೆ ಕಾಂಪೌಂಡ್‌ ಸಂಪೂರ್ಣ ಹಳೆಯದಾಗಿದ್ದು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದೇಶ ಬಂದ ನಂತರ ಕಾಂಪೌಂಡ್‌ ನಿರ್ಮಾಣ ಮಾಡಲಾಗುತ್ತದೆ. ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ ಕ್ಷ-ಕಿರಣ ಮತ್ತು ಔಷಧ ವಿತರಣೆ ಸೇವೆಯನ್ನು  24x7 ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹೊನ್ನಪ್ಪ ಜಿ.ಎಂ. ತಿಳಿಸಿದರು. ‘ಕ್ಯಾಂಟೀನ್‌ ತೆರೆಯುವ ಸಂಬಂಧ ಹಲವಾರು ಬಾರಿ ಟೆಂಡರ್‌ ಕರೆದರೂ ಯಾರೂ ಮುಂದೆ ಬರುತ್ತಿಲ್ಲ. ಕ್ಯಾಂಟೀನ್‌ ಕಟ್ಟಡ ಶವಾಗಾರದ ಮುಂದೆ ಇರುವುದೇ ಇದಕ್ಕೆ ಕಾರಣ. ಸರ್ಕಾರದ ನಿಯಮಾನುಸಾರ ಯಾರಾದರೂ ಮುಂದೆ ಬಂದರೆ ಕ್ಯಾಂಟೀನ್‌ ವ್ಯವಸ್ಥೆ ಆಗಲಿದೆ’ ಎಂದರು. ‘ತಜ್ಞ ವೈದ್ಯರ ಕೊರತೆ ಇದ್ದು ಸದ್ಯ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು  ಒತ್ತಡದಲ್ಲಿದ್ದಾರೆ. ತಜ್ಞ ವೈದ್ಯರು ಮತ್ತು ತುರ್ತು ಚಿಕಿತ್ಸಾ ತಜ್ಞರನ್ನು ಸರ್ಕಾರ ಶೀಘ್ರ ನೇಮಕಾತಿ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.