
ಬಿರಾದಾರ ದೇವಿಂದ್ರಪ್ಪಾ ಎನ್.
ಹಾವೇರಿ: ‘ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ಜರುಗಲಿದೆ. ಕಕ್ಷಿದಾರರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಪರಿಹಾರ ಪಡೆದುಕೊಳ್ಳಬಹುದು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೀವನದಲ್ಲಿ ನಗು ಮತ್ತು ನೆಮ್ಮದಿ ಮುಖ್ಯ. ಅವುಗಳನ್ನು ಖರೀದಿಸಲು ಸಾಧ್ಯವಿಲ್ಲ. ನೆಮ್ಮದಿ ಜೀವನ ನಡೆಸಬೇಕಾದರೆ, ಆಸ್ಪತ್ರೆ ಹಾಗೂ ನ್ಯಾಯಾಲಯದ ಅಲೆದಾಟ ಇರಬಾರದು. ವ್ಯಾಜ್ಯ ಪ್ರಕರಣಗಳನ್ನು ರಾಜಿ ಸಂಧಾನದಿಂದ ಇತ್ಯರ್ಥಪಡಿಸಿಕೊಂಡಾಗ, ಸಮಯ ಹಾಗೂ ಹಣ ಎರಡೂ ಉಳಿಯುತ್ತವೆ’ ಎಂದರು.
‘ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯ, ಮೋಟಾರು ವಾಹನಗಳ ಅಪಘಾತ ನ್ಯಾಯಾಧೀಕರಣ, ಚೆಕ್ ಅಮಾನ್ಯ, ವಾಣಿಜ್ಯ, ವ್ಯಾಜ್ಯಪೂರ್ವ, ಸೇವಾ ಪ್ರಕರಣಗಳು, ರಾಜಿ ಆಗಬಲ್ಲ ಅಪರಾಧಿಕ, ಗ್ರಾಹಕ ವ್ಯಾಜ್ಯ, ಪಾಲುದಾರಿಕಾ, ಭೂ ಸ್ವಾಧೀನ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದಿಂದ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.
‘ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು, ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು, ವಿವಾದವು ದೂರವಾಗುವುದು. ರಾಜಿ ಸಂಧಾನದಿಂದ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು’ ಎಂದರು.
ದಂಡದಲ್ಲಿ ಶೇ 50ರಷ್ಟು ರಿಯಾಯಿತಿ: ಮೋಟಾರು ವಾಹನಗಳ ಕಾಯ್ದೆಯಡಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. 1991–92ರಿಂದ 2019–20ರ ವರೆಗಿನ ಅವಧಿಯಲ್ಲಿ ದಾಖಲಾದ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಮಾಲೀಕರು ದಂಡ ಪಾವತಿಸಿದರೆ, ಶೇ 50ರಷ್ಟು ರಿಯಾಯಿತಿ ಸಿಗಲಿದೆ’ ಎಂದು ನ್ಯಾಯಾಧೀಶ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ತಿಳಿಸಿದರು.
‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ರಿಯಾಯಿತಿ ಘೋಷಿಸಲಾಗಿದೆ. 2025ರ ನವೆಂಬರ್ 21ರಿಂದ ಡಿಸೆಂಬರ್ 12ರ ವರೆಗಿನ ಅವಧಿಯಲ್ಲಿ ದಂಡ ಪಾವತಿಸಲು ಅವಕಾಶವಿದ್ದು, ಶೇ 50ರಷ್ಟು ರಿಯಾಯಿತಿ ಲಭ್ಯವಾಗಲಿದೆ’ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಶ್ರೀಶೈಲಜಾ ಇದ್ದರು.
‘ಉಚಿತ ಸಹಾಯವಾಣಿ– 151000’
‘ಕಾನೂನು ನೆರವಿಗಾಗಿ ಹಾಗೂ ಅದಾಲತ್ ಮಾಹಿತಿಗಾಗಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ (ದೂ: 08375-233939 ) ಸಂಪರ್ಕಿಸಹುದು. 151000 – ಉಚಿತ ಸಹಾಯವಾಣಿಗೂ ಕರೆ ಮಾಡಬಹುದು’ ಎಂದು ನ್ಯಾಯಾಧೀಶರಾದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ತಿಳಿಸಿದರು. ‘ರಾಣೆಬೆನ್ನೂರು ಹಿರೇಕೆರೂರು ಬ್ಯಾಡಗಿ ಶಿಗ್ಗಾವಿ ಸವಣೂರು ಮತ್ತು ಹಾನಗಲ್ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಗಳನ್ನು ಸಂಪರ್ಕಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.