ADVERTISEMENT

ಹಾವೇರಿ: ಯೂರಿಯಾ ಅಭಾವ; ರೈತರ ಆಕ್ರೋಶ

ಅಗಡಿ ಗ್ರಾಮದ ಸೊಸೈಟಿಯಲ್ಲಿ ರೈತರ ಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:39 IST
Last Updated 17 ಜುಲೈ 2025, 5:39 IST
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಖರೀದಿಗಾಗಿ ರೈತರು ಬುಧವಾರ ಮುಗಿಬಿದ್ದರು
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಖರೀದಿಗಾಗಿ ರೈತರು ಬುಧವಾರ ಮುಗಿಬಿದ್ದರು   

ಹಾವೇರಿ: ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಗೊಬ್ಬರ ಪಡೆಯಲು ರೈತರು ಬುಧವಾರ ಮುಗಿಬಿದ್ದರು. ಸಮರ್ಪಕ ಪ್ರಮಾಣದಲ್ಲಿ ಯೂರಿಯಾ ಸರಬರಾಜು ಮಾಡದ ಕೃಷಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.

ಗ್ರಾಮದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ (ಸೊಸೈಟಿ) ಇತ್ತೀಚೆಗೆ ಒಂದು ಲೋಡ್ (15 ಟನ್) ಯೂರಿಯಾ ಕಳುಹಿಸಲಾಗಿತ್ತು. ಅಗಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು, ಇದೇ ಸೊಸೈಟಿ ಮೂಲಕ ಯೂರಿಯಾ ಗೊಬ್ಬರ ಖರೀದಿಸುತ್ತಾರೆ.

15 ಟನ್ ಗೊಬ್ಬರ ಬಂದ ಮಾಹಿತಿ ತಿಳಿಯುತ್ತಿದ್ದಂತೆ ಅಗಡಿ ಹಾಗೂ ಇತರೆ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೊಸೈಟಿಗೆ ಬಂದಿದ್ದರು. ಗೊಬ್ಬರ ಖರೀದಿಸಲು ಮುಗಿಬಿದ್ದರು. ಲಭ್ಯವಿರುವ ಗೊಬ್ಬರವನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡುವುದೇ ಸೊಸೈಟಿಗೆ ಸವಾಲಾಯಿತು. ಇದೇ ಕಾರಣಕ್ಕೆ ಕೆಲ ಹೊತ್ತು ಗೋದಾಮಿನ ಶಟರ್ ಬಂದ್ ಮಾಡಿದ್ದರು. ಇದರಿಂದಾಗಿ ಕೋಪಗೊಂಡ ರೈತರು, ಸೊಸೈಟಿ ಹಾಗೂ ಕೃಷಿ ಇಲಾಖೆ ವಿರುದ್ಧ ಹರಿಹಾಯ್ದರು.

ADVERTISEMENT

‘ನಿಗದಿಯಷ್ಟು ಹಣ ನೀಡಲು ಸಿದ್ಧವಿದ್ದು, 100 ಟನ್‌ ಗೊಬ್ಬರ ಬೇಕೆಂದು ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಕೇವಲ 15 ಟನ್ ಗೊಬ್ಬರ ಬಂದಿದೆ. ಒಬ್ಬ ರೈತರಿಗೆ ಕೇವಲ 1 ಅಥವಾ 2 ಚೀಲ ಮಾತ್ರ ಸಿಗಲಿದೆ. ಆದರೆ, ರೈತರು ಐದಾರು ಚೀಲಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಒಬ್ಬರಿಗೆ ಅತೀ ಹೆಚ್ಚು ಚೀಲ ನೀಡಿದರೆ, ಎಲ್ಲರಿಗೂ ನೀಡಲು ಆಗುವುದಿಲ್ಲ’ ಎಂದು ಸೊಸೈಟಿಯವರು ಹೇಳಿದರು.

ಅದಕ್ಕೆ ಒಪ್ಪದ ರೈತರು, ‘ಗೋವಿನ ಜೋಳದ ಬೆಳೆ ಮೊಳಕೆಯೊಡೆದು ಬೆಳೆಯುತ್ತಿದೆ. ಈಗ ಮಳೆಯು ಉತ್ತಮವಾಗಿದೆ. ಇಂಥ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಹಾಕಲೇ ಬೇಕು. ಇಲ್ಲದಿದ್ದರೆ, ಬೆಳೆಯು ಹಾಳಾಗುತ್ತದೆ. ಇಳುವರಿ ಬರುವುದಿಲ್ಲ. ಬಿತ್ತನೆಗೆ ಮಾಡಿದ ಸಾಲವನ್ನೂ ತೀರಿಸಲು ಆಗುವುದಿಲ್ಲ. ಹೀಗಾಗಿ, ಕೇಳಿದಷ್ಟು ಯೂರಿಯಾ ಗೊಬ್ಬರ ನೀಡಬೇಕು’ ಎಂದು ಆಗ್ರಹಿಸಿದರು.

ಸೊಸೈಟಿ ಹಾಗೂ ರೈತರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ನಂತರ, ರೈತರಿಗೆ ತಲಾ 1 ಅಥವಾ 2 ಚೀಲ ಗೊಬ್ಬರವನ್ನು ನೀಡಲಾಯಿತು. ಕೊನೆ ಸರದಿಯಲ್ಲಿದ್ದ ರೈತರಿಗೆ ಗೊಬ್ಬರ ಸಿಗಲಿಲ್ಲ.

‘ದೇಶಕ್ಕೆ ಅನ್ನ ನೀಡುವ ರೈತರಿಗೆ ಬೇಡಿಕೆಯಷ್ಟು ಗೊಬ್ಬರ ನೀಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಅಗಡಿ ರೈತರು ಗೊಬ್ಬರಕ್ಕಾಗಿ ಮುಗಿಬೀಳುವ ಸ್ಥಿತಿ ಬಂದಿದೆ. ಕೂಡಲೇ ಸರ್ಕಾರದವರು, ಅಗತ್ಯವಿರುವ ಗೊಬ್ಬರ ನೀಡಬೇಕು’ ಎಂದು ರೈತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.