ADVERTISEMENT

ಘನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ನೀಲನಕ್ಷೆ

ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 22:15 IST
Last Updated 17 ಫೆಬ್ರುವರಿ 2020, 22:15 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಸರ್ಕಾರ ಬಿಬಿಎಂಪಿ ಜೊತೆ ಕೈಜೋಡಿಸಿದೆ. ಈ ಸಮಸ್ಯೆಯನ್ನು 2021ರ ಜೂನ್‌ 31ರೊಳಗೆ ಸಂಪೂರ್ಣ ನಿವಾರಣೆ ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ 2012ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಬಿಬಿಎಂಪಿ ಮತ್ತು ಸರ್ಕಾರ ಜಂಟಿಯಾಗಿ ಕೈಗೊಳ್ಳಲು ಉದ್ದೇಶಿಸಿರುವ ಕೆಲಸ ಕಾರ್ಯಗಳ ಬಗ್ಗೆ ನ್ಯಾಯಪೀಠಕ್ಕೆ ಅರುಹಿದರು.

ADVERTISEMENT

ಅಂಕಿ ಅಂಶ ಪರಿಶೀಲಿಸಿದ ನ್ಯಾಯಪೀಠ, ‘ಪಾಲಿಕೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿವರಣೆ ನಡುವೆ ವ್ಯತ್ಯಾಸಗಳಿವೆ. ಆದ್ದರಿಂದ, ಈ ಕುರಿತು ಹೊಸ ಪ್ರಮಾಣ ಪತ್ರ ಸಲ್ಲಿಸಿ’ ಎಂದು ನಾವದಗಿ ಅವರಿಗೆ ಸೂಚಿಸಿತು. ಅಂತೆಯೇ, ‘ಬಿಬಿಎಂಪಿ ಆಯುಕ್ತರು ಮಾರ್ಚ್‌ 3ರೊಳಗೆ ಹೊಸ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದೂ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.