ADVERTISEMENT

‍ಕಲಬುರಗಿ: ಪ್ರತಿ ಟನ್‌ಗೆ ₹3,500 ನಿಗದಿಗೆ ರೈತರ ಬೇಡಿಕೆ

ರೈತರು, ಕಾರ್ಖಾನೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:28 IST
Last Updated 25 ಅಕ್ಟೋಬರ್ 2025, 6:28 IST
ಕಲಬುರಗಿಯಲ್ಲಿ ಕಬ್ಬು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಶುಕ್ರವಾರ ಸಭೆ ನಡೆಸಿದರು
ಕಲಬುರಗಿಯಲ್ಲಿ ಕಬ್ಬು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಶುಕ್ರವಾರ ಸಭೆ ನಡೆಸಿದರು   

ಕಲಬುರಗಿ: ಜಿಲ್ಲೆಯಲ್ಲಿ ಕಬ್ಬಿನ ಕಾರ್ಖಾನೆಗಳ ಆರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದರೂ ಈತನಕ ಕಬ್ಬಿನ ದರ ನಿಗದಿ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಈ ಸಂಬಂಧ ಜಿಲ್ಲಾಡಳಿತ ಎರಡನೇ ಸುತ್ತಿನಲ್ಲಿ ಶುಕ್ರವಾರ ಕಬ್ಬು ಬೆಳೆಗಾರರು ಹಾಗೂ ಕಬ್ಬು ಕಾರ್ಖಾನೆಗಳ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿದೆ.

ರೈತರೊಂದಿಗೆ ಸಭೆ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರು ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ರೈತರು ಹಲವು ಬೇಡಿಕೆಗಳನ್ನು ಮಂಡಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ‘ಅತಿವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕಬ್ಬಿನ ಬೆಳೆಯೊಂದಷ್ಟೇ ಉಳಿದಂತಾಗಿದೆ. ಪ್ರತಿ ಟನ್‌ ಕಬ್ಬಿಗೆ ಕಟಾವು ಹಾಗೂ ಸಾಗಣೆ ವೆಚ್ಚ ಹೊರತು ‍ಪಡಿಸಿ ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ನಡೆಯುತ್ತಲೇ ಇದೆ. ಅಫಜಲಪುರದ ಎಪಿಎಂಸಿಯಲ್ಲಿ ಈಗಾಗಲೇ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಲಾಗುತ್ತಿದೆ. ಅದನ್ನೇ ಬಳಸಿಕೊಂಡು ರೈತರ ಕಬ್ಬು ತೂಕ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಟಾವು ಮಾಡಲಾದ ರೈತರ ಕಬ್ಬು ಕಾರ್ಖಾನೆ ತಲುಪಿದಾಕ್ಷಣವೇ ತೂಕ ಮಾಡಬೇಕು. ಒಂದೆರಡು ದಿನ ಗಾಡಿ ನಿಲ್ಲಿಸಿ, ಕಬ್ಬು ನುರಿಸುವ ಸಮಯದಲ್ಲಿ ತೂಕ ಮಾಡಿದರೆ, ರೈತರಿಗೆ ತೂಕ ನಷ್ಟವಾಗುತ್ತದೆ’ ಎಂದು ಅಧಿಕಾರಿಗಳ ಗಮನ ಸೆಳೆದರು.

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಈಗಾಗಲೇ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿಪಡಿಸಲಾಗಿದೆ. ಅದರಂತೆ ನಮ್ಮಲ್ಲೂ ಕಾರ್ಖಾನೆಗಳು ಕಬ್ಬು ನುರಿಸುವ ಮುನ್ನವೇ ಪ್ರತಿ ಟನ್‌ಗೆ ₹3,500 ದರ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.‌

ಕಾರ್ಖಾನೆ ಅಧಿಕಾರಿಗಳ ಸಭೆ: ರೈತರೊಂದಿಗೆ ಸಭೆ ಬಳಿಕ ಮಧ್ಯಾಹ್ನ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರು ಜಿಲ್ಲೆಯಲ್ಲಿರುವ ಕಬ್ಬು ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಸಭೆಯಲ್ಲಿ ಕಬ್ಬು ಕಾರ್ಖಾನೆಗಳ ಅಧಿಕಾರಿಗಳು ಸರ್ಕಾರದ ನಿಯಮಾವಳಿಯಂತೆ ಎಫ್‌ಆರ್‌ಪಿ ಅನ್ವಯ ದರ ಪಾವತಿ ಹಾಗೂ ನಿಯಮದಂತೆ ದೂರಕ್ಕೆ ಅನುಗುಣವಾಗಿ ಸಾಗಣೆ ವೆಚ್ಚ ಕಡಿತಗೊಳಿಸುವುದಾಗಿ ಹೇಳಿವೆ’ ಎಂದು ಮೂಲಗಳು ತಿಳಿಸಿವೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ರೈತ ಮುಖಂಡರು ಕಬ್ಬು ಬೆಳೆಗಾರರ ಪಾಲ್ಗೊಂಡಿದ್ದರು

ಜಿಲ್ಲಾಧಿಕಾರಿ ಖಡಕ್‌ ಸೂಚನೆ!

ಜಂಟಿ ಕೃಷಿ ನಿರ್ದೇಶಕರು ಹಾಗೂ ಆಹಾರ ಇಲಾಖೆ ಉಪನಿರ್ದೇಶಕರ ಜೊತೆಗಿನ ಸಭೆಯ ಬಳಿಕ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಖುದ್ದು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ‘ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ಉದಾರ ನಿಲುವು ಪ್ರಕಟಿಸಬೇಕು’ ಎಂದು ಸೂಚಿಸಿದ್ದಾರೆ. ‘ಬೆಳಗಾವಿ ಮಾದರಿ ದರ ನೀಡಲು ಕ್ರಮವಹಿಸಬೇಕು. ಶನಿವಾರ ಮಧ್ಯಾಹ್ನದೊಳಗೆ ನಿಲುವು ತಿಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕಾರ್ಖಾನೆಗಳು ಕಬ್ಬಿನ ಸಕ್ಕರೆ ಇಳವರಿಯನ್ನು ಪ್ರತಿ 15 ದಿನಕ್ಕೊಮ್ಮೆ ಪರಿಶೀಲಿಸಬೇಕು. ಕಬ್ಬು ಪೂರೈಸಿದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು
-ಶರಣಬಸಪ್ಪ ಮಮಶೆಟ್ಟಿ ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.