
ಕಲಬುರಗಿ: ನಗರದ ಅಟಲ ಬಿಹಾರಿ ವಾಜಪೇಯಿ ಬಡಾವಣೆಯ ಶಿವನ ಕಟ್ಟೆಯ ಬಳಿ ಮದ್ಯ ಕುಡಿದು ಮಲಗಿದ್ದ ಪೊಲೀಸರೊಬ್ಬರ ಕೊರಳಲ್ಲಿದ್ದ ಚಿನ್ನಾಭರಣ, ಕಿಸೆಯಲ್ಲಿದ್ದ ಮೊಬೈಲ್ ಫೋನ್ ಹಾಗೂ ಪಕ್ಕದಲ್ಲೇ ನಿಲ್ಲಿಸಿದ್ದ ಬೈಕ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ವಿಶ್ವಜ್ಯೋತಿ ಕಾಲೊನಿ ನಿವಾಸಿ ಮಲ್ಲಿಕಾರ್ಜುನ ಸಂಕಾಲಿ ಚಿನ್ನಾಭರಣ ಹಾಗೂ ಬೈಕ್ ಕಳೆದುಕೊಂಡವರು. ‘ಕೊರಳಲ್ಲಿದ್ದ 35 ಗ್ರಾಂ ಬಂಗಾರ ಚೈನು, ₹30 ಸಾವಿರ ಮೊತ್ತ ದ್ವಿಚಕ್ರ ವಾಹನ ಹಾಗೂ ₹10 ಸಾವಿರ ಮೌಲ್ಯದ ಮೊಬೈಲ್ ಕಳುವಾಗಿದೆ’ ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ್ಣಿನ ವ್ಯಾಪಾರಿ ನೇಣಿಗೆ ಶರಣು
ಕಲಬುರಗಿಯ ರಾಮತೀರ್ಥ ನಗರದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಜಿತೇಶ ಪವಾರ (25) ಮೃತರು. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಮನೆಗೆ ಹಾಕಿದ್ದ ಬೀಗ ಒಡೆದ ಕಳ್ಳವರು ₹1 ಲಕ್ಷ ಮೌಲ್ಯದ 20 ಗಾಂ ಚಿನ್ನದ ಬಳೆ ಕದ್ದು ಪರಾರಿಯಾಗಿದ್ದಾರೆ.
ಕಲಬುರಗಿಯ ಮಿಸ್ಬಾ ನಗರದ ನಿವಾಸಿ ಜಬಿನ್ ಫಾತಿಮಾ ಚಿನ್ನಾಭರಣ ಕಳೆದುಕೊಂಡವರು.
‘ಸಂಬಂಧಿಕರ ಮದುವೆ ಸಮಾರಂಭಕ್ಕೆ ಮನೆಗೆ ಬೀಗಹಾಕಿ ಹೋಗಿದ್ದಾಗ ಕಳವು ನಡೆದಿದೆ’ ಎಂದು ದೂರಿನಲ್ಲಿ ಜಬಿನ್ ಫಾತಿಮಾ ತಿಳಿಸಿದ್ದಾರೆ. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಆರೋಪ: ಪ್ರಕರಣ ದಾಖಲು
ಕಲಬುರಗಿ ತಾಲ್ಲೂಕಿನ ಧರ್ಮಾಪುರ ತಾಂಡಾದಲ್ಲಿ ದೀಪಾವಳಿ ಹಬ್ಬದ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಎರಡೂ ಗುಂಪಿನವರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.
ಗುಂಡುರಾಜ ಶಂಕರ ನೀಡಿದ ದೂರಿನನ್ವಯ ಎಂಟು ಮಂದಿ ವಿರುದ್ಧ ಹಾಗೂ ಕಮಲಾಬಾಯಿ ಪವಾರ ನೀಡಿದ ದೂರಿನನ್ವಯ 13ಕ್ಕೂ ಹೆಚ್ಚು ಮಂದಿ ವಿರುದ್ಧ ನಗರದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಿಒ ವಿರುದ್ಧ ಪ್ರಕರಣ
ರಸ್ತೆಗೆ ಮುರುಂ ಹಾಕಿಸುವಂತೆ ಪದೇಪದೆ ಒತ್ತಾಯಿಸಿದ್ದಕ್ಕೆ ಕೋಪಗೊಂಡು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಪೇಠಶಿರೂರ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕುರಿತು ಬೆನ್ನೂರ(ಬಿ) ಗ್ರಾಮದ ಮಾತಾ ಮಾಣಿಕೇಶ್ವರ ಆಶ್ರಮದ ಪೀಠಾಧಿಪತಿ ಭಾರದ್ವಾಜ ಸ್ವಾಮೀಜಿ ದೂರು ನೀಡಿದ್ದರು.
ಅದರನ್ವಯ ಪೇಠಶಿರೂರ ಪಿಡಿಒ ಬಾಬುರಾವ್ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.