
ಸೇಡಂ: ಬಂಜಾರ ಸಮುದಾಯದ ‘ಮೇರಾ ಸಂಭ್ರಮ’ದ ಪರಂಪರೆಯ ವೈಭವಕ್ಕೆ ಪಟ್ಟಣದ ಸೇರಿದಂತೆ ತಾಲ್ಲೂಕಿನ ತಾಂಡಾಗಳು ಸಾಕ್ಷಿಯಾದವು.
ಮನೆ–ಮನಗಳನ್ನು ಬೆಳಗಿಸುವ ದೀಪಾವಳಿ ಹಬ್ಬವನ್ನು ಕಾಡಂಚಿನ ತಾಂಡಾ ನಿವಾಸಿಗಳು ಅತ್ಯಂತ ಸಂಭ್ರಮದಿಂದ ಸಂಸ್ಕೃತಿಯ ಪರಂಪರೆಯೊಂದಿಗೆ ಅ.21 ಮತ್ತು 22ರಂದು ಆಚರಿಸಿ ಗಮನ ಸೆಳೆದರು. ವಾರದಿಂದ ತಾಂಡಾಗಳ ಮನೆಗಳಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಮನೆಯನ್ನು ಸ್ವಚ್ಛಗೊಳಿಸಿದ ತಾಂಡಾ ನಿವಾಸಿಗಳು ಮನೆ ಎದುರು ರಂಗೋಲಿ ಬಿಡಿಸಿ ವಿವಿಧ ಹೂಗಳಿಂದ ಅಲಂಕರಿಸಿ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬವನ್ನು ಬಂಜಾರ ಸಮಾಜದವರು ಡಮ್ ಎನ್ನುವ ಆಟೊ ಬಾಂಬ್, ಸೂರ್ರ್ ಶಬ್ದ ಜೊತೆ ಝಗಮಗಿಸುವ ಸುರ್ ಸುರ್ ಬತ್ತಿ, ಗಿರ್ರನೆ ತಿರುಗುವ ಜಿಮ್ಮಿಚಕ್ರಿ (ಬಿಸಾಕಲ್), ಆಗಸದತ್ತ ಚಿಮ್ಮುವ ರಾಕೆಟ್ ಹಚ್ಚಿ ಸಂಭ್ರಮಿಸುವುದಕ್ಕೆ ಮಾತ್ರ ಸೀಮಿತವಾಗದೆ, ನಿಸರ್ಗದ ಮಡಿಲಿನಲ್ಲಿ ವಿಭಿನ್ನವಾಗಿ ದೀಪಾವಳಿ ಆಚರಿಸಿ ಗಮನ ಸೆಳೆದರು. ಬಂಜಾರ ಸಂಸ್ಕೃತಿಯ ವೇಷ ಧರಿಸಿದ ಬಂಜಾರ ಬೆಡಗಿಯರು (ಮದುವೆಯಾಗದ ಯುವತಿಯರು) ಮಣ್ಣಿನ ಪಣತೆ (ಹಣತೆ)ಯ ಜ್ಯೋತಿಯನ್ನು ಕೈಯಲ್ಲಿ ಹಿಡಿದು ತಾಂಡಾದಲ್ಲಿನ ನಾಯಕ, ಕಾರಬಾರಿ (ತಾಂಡಾದ ಮುಖಂಡರು) ಮನೆಗೆ ತೆರಳಿ ಜ್ಯೋತಿ ಬೆಳಗಿಸುತ್ತಾ
‘ವರಸೆ ದಾಡೇರ ಮೇರಾ ಯಾಡಿ ತೋನ ಮೇರಾ
ಸೇವಾಲಾಲ್ ಬಾಪು ತೋನ ಮೇರಾ
ಭೀಯಾ ತೋನ ಮೇರಾ
ಮಾಮಾ ತೋನ ಮೇರಾ ಹೀಗೆ ಸಂಬಂಧಿಕರಿಗೆ ಜ್ಯೋತಿ ಬೆಳಗಿಸುತ್ತಾ ವಿಭಿನ್ನವಾಗಿ ಶುಭ ಹಾರೈಸಿದರು. ಹಾರೈಸುತ್ತಾ ಜೀವನದಲ್ಲಿ ಶುಭ ಕಾರ್ಯಗಳು ನಡೆಯಲಿ, ಯಶಸ್ಸಿನ ಜೀವನ ನಿಮ್ಮದಾಗಲಿ. ಅಂಧಕಾರ, ದುಷ್ಟಶಕ್ತಿ ತೊಲಗಿ ಸಮೃದ್ಧಿ ನೆಲೆಸಲಿ, ವ್ಯಕ್ತಿಯ ಆಯಸ್ಸು ಹೆಚ್ಚಲಿ. ಮನೆಗಳಲ್ಲಿ ಸತ್ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.. ತಾಂಡಾದ ಮನೆಗಳಿಗೆ ತೆರಳಿ ದೀಪ ಬೆಳಗಿಸಿ ಶುಭ ಹಾರೈಸುತ್ತಾ ಜೀವನದಲ್ಲಿ ಜ್ಯೋತಿ ಮನೆ–ಮನಗಳನ್ನು ಬೆಳಗಿಸಿ ಪ್ರಜ್ವಲಿಸುವಂತಾಗಲಿ ಎಂದು ಹಾರೈಸುವ ಮೂಲಕ ‘ಮೇರಾ ಸಂಭ್ರಮ’ ಬಂಜಾರಾ ಬೆಡಗಿಯರು ಸಾಕ್ಷಿಯಾದರು. ಸಾಯಂಕಾಲದಿಂದ ಪ್ರಾರಂಭವಾದ ಮೇರಾ ಸಂಭ್ರಮ ತಡರಾತ್ರಿ ಸೇರಿದಂತೆ ಕೆಲವು ತಾಂಡಾಗಳಲ್ಲಿ ಬೆಳಗಿನವರೆಗೆ ನಡೆಯಿತು. ಜೊತೆಗೆ ಸಾಮೂಹಿಕ ನೃತ್ಯಕ್ಕೆ ಹಜ್ಜೆ ಹಾಕುತ್ತಾ, ಲಂಬಾಣಿ ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾ ನಕ್ಕು ನಲಿದರು.
ಪ್ರಕೃತಿಯ ಆರಾಧಕರಾಗಿರುವ ಬಂಜಾರ ಸಮಾಜದವರು ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ನೀರು ಮತ್ತು ಗಾಳಿಗೆ ನಮಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಮನೆಯಲ್ಲಿ ವಿವಿಧ ತರಹೇವಾರಿ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ಬೆಳಿಗ್ಗೆ ಊಟ ಮಾಡಿ ಅಡವಿಗೆ ತೆರಳಿದ ಬಂಜಾರ ಸಮುದಾಯದ ಯುವತಿಯರು ಅಡವಿಯಲ್ಲಿನ ತರಹೇವಾರಿ ಹೂಗಳನ್ನು ಬುಟ್ಟಿಯಲ್ಲಿ ತುಂಬಿ ಅವುಗಳನ್ನು ತಲೆಮೇಲೆ ಹೊತ್ತು ನೃತ್ಯ ಮಾಡುತ್ತಾ ನಾಡಿಗೆ ಆಗಮಿಸಿದರು. ಹೂ ಬುಟ್ಟಿ ತುಂಬಿದ ಬಂಜಾರ ಯುವತಿಯರಿಗೆ ವಿವಿಧ ವಾದ್ಯಗಳ ಸಮೇತ ಯುವಕರು ನೃತ್ಯ ಹಾಕುತ್ತಾ ಸ್ವಾಗತಿಸಿದರು. ಹೂಗಳನ್ನು ದೇವರಿಗೆ ಸಮರ್ಪಿಸಿ ನಂತರ ತಾಂಡಾದ ಮುಖಂಡರಿಗೆ ಅರ್ಪಸಿದರು. ತಾಂಡಾದಲ್ಲಿನ ಮನೆಗಳಿಗೆ ಹಂಚಿ ಪರಸ್ಪರ ಪ್ರೀತಿ–ಬಾಂಧವ್ಯದೊಂದಿಗೆ ಹಬ್ಬವನ್ನು ಆಚರಿಸಿದರು. ತಾಂಡಾದ ಮಂದಿರಗಳ ಮುಂದೆ ಎಲ್ಲರೂ ಸಾಮೂಹಿಕ ನೃತ್ಯಕ್ಕೆ ಹೆಜ್ಜೆ ಹಾಕುತ್ತಾ ಸಮುದಾಯದ ಹಬ್ಬವಾಗಿ ಒಗ್ಗಟ್ಟಿನಿಂಧ ಆಚರಿಸಿದರು.
ಬಾಂಧವ್ಯ ಬೆಸೆಯುವ ‘ಮೇರಾ’
ಬಂಜಾರ ಸಮಾಜದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವ. ಅದರಲ್ಲಿಯೂ ಮಹಿಳೆಯರು ಇದನ್ನು ಮೆಚ್ಚಿಕೊಂಡು ಆಚರಿಸುವ ಹಬ್ಬ. ಬದುಕಿನ ಬಂಡಿ ಸಾಗಿಸಲು ನಿತ್ಯ ದುಡಿಯುವ ಕಾಯಕ ಜೀವಿಗಳು. ಅವತ್ತೇ ದುಡಿದು ಅಂದೇ ಖರ್ಚು ಮಾಡುವವರು ಇದ್ದಾರೆ. ನಿತ್ಯ ಕೆಲಸಕ್ಕಾಗಿ ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ವಿವಿಧೆಡೆಗಳಲ್ಲಿ ವಲಸೆ ಹೋಗುತ್ತಾರೆ. ಹಬ್ಬಗಳಿಗೆ ವಾಪಸಾಗುತ್ತಾರೆ. ಉದ್ಯಮಿಗಳು, ಶಿಕ್ಷಕರು, ವೈದ್ಯರು, ರಾಜಕಾರಣಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಜಾರ ಸಮಾಜದವರು ತಪ್ಪದೇ ದೀಪಾವಳಿ ಹಬ್ಬಕ್ಕೆ ತಾಂಡಾಗಳಿಗೆ ಮರಳುತ್ತಾರೆ. ಎಲ್ಲರೂ ಪರಸ್ಪರ ಕೂಡಿಕೊಂಡು ಎರಡ್ಮೂರು ದಿನಗಳ ಕಾಲ ನೋವು–ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ದೀಪಾವಳಿಯ ದಿನದಂದು ವಿಶೇಷವಾಗಿ ಬಂಜಾರ ಸಮಾಜದಲ್ಲಿ ಮದುವೆಯಾಗದ ಮಹಿಳೆಯರು ತಾಂಡಾದ ಪ್ರತಿಯೊಬ್ಬರ ಮನೆಗೆ ದೀಪವಿಡಿದು ತೆರಳಿ (ಮೇರಾ) ಶುಭ ಹಾರೈಸುತ್ತಾರೆ. ವರ್ಷದಲ್ಲಿ ಯಾವುದೇ ಸಂದರ್ಭದಲ್ಲಿಯೂ ಪರಸ್ಪರ ಜಗಳಗಳಾದರೂ ಅವರು ಮಹಿಳೆಯರ ಮೂಲಕ ಮೇರಾ ಆಚರಿಸಿ ಪರಸ್ಪರ ಒಗ್ಗಟ್ಟಾಗಿ ಮುಂದಿನ ಜೀವನ ಸಾಗಿಸಲು ಪ್ರಯತ್ನ ಮಾಡುತ್ತಾರೆ. ಬಂಜಾರ ಬೆಡಗಿಯರ ಮೇರಾ ಕಹಿಗಳನ್ನು ಮರೆತು ಸಿಹಿ ಬಾಂಧವ್ಯವನ್ನು ಬೆಸೆಯುವ ಕೆಲಸ ಪರಂಪರೆಯಾದಿಯಾಗಿ ತಾಂಡಾಗಳಲ್ಲಿ ಮೂಡುತ್ತಿರುವುದು ವಿಶೇಷ. ತಾಂಡಾಗಳಲ್ಲಿನ ಪ್ರಮುಖರೇ ಸಣ್ಣಪುಟ್ಟ ಸಮಸ್ಯೆಗಳಿಗೆ ತಾಂಡಾದಲ್ಲಿರುವ ನಾಯಕ, ಕಾರಭಾರಿಗಳೇ ನೇತೃತ್ವ ವಹಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ತಾಂಡಾಗಳಲ್ಲಿನ ಜನರು ಹೆಚ್ಚಾಗಿ ಕೋರ್ಟ್ ಕಚೇರಿ ಅಲೆದಾಡುವುದು ಕಡಿಮೆಯೆಂಬಂತಾಗಿದೆ.
ತಂತ್ರಜ್ಞಾನದ ಮಧ್ಯೆಯೂ ಬಂಜಾರ ಸಂಸ್ಕೃತಿ ಜೀವ
ಪ್ರಸ್ತುತ ದಿನಗಳಲ್ಲಿ ಜೀವನ ಶೈಲಿಯೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಪಾಶ್ಚಿಮಾತ್ಯ ಸೇರಿದಂತೆ ವಿಭಿನ್ನ ಶೈಲಿಗಳ ಉಡುಪುಗಳು ಮಾರುಕಟ್ಟೆಗೆ ಆಗಮಿಸಿ ಕೆಲ ಸಮುದಾಯಗಳ ಸಂಸ್ಕೃತಿಗಳ ಮೇಲೆ ಅಪ್ಪಳಿಸಿವೆ. ಕೆಲ ಜನರು ತಾವಾಗಿಯೇ ಆಹ್ವಾನಿಸಿಕೊಂಡಿದ್ದಾರೆ. ಹೀಗಾಗಿ ದೇಶೀಯ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಆದರೆ ನಮ್ಮ ಮಧ್ಯೆಯೇ ಇರುವ ಬಂಜಾರ ಸಮುದಾಯದವರು ಪರಂಪರೆಯನ್ನು ಮುನ್ನಡೆಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬಂಜಾರ ಸಮಾಜದ ಶ್ರೇಷ್ಠ ಉಡುಪಾಗಿರುವ ಲಂಗ–ದಾವಣಿ, ಕನ್ನಡಿಯ ಪ್ರತಿಬಿಂಬದಂತೆ ಸಾಗಿಸುತ್ತಿದ್ದಾರೆ. ಅವರ ಕುಟುಂಬಗಳಲ್ಲಿ ಸಣ್ಣ ಪುಟ್ಟ ಕಾರಣಗಳು ಸೇರಿದಂತೆ ಮದುವೆವರೆಗೆ ನಡೆದರೀ ಸಹ ಒಗ್ಗಟ್ಟಿನಿಂದ ಬಂಜಾರ ಉಡುಪು ಧರಿಸಿ ಆಚರಿಸುತ್ತಾರೆ. ಮದುವೆಯಾಗದ ಮಹಿಳೆಯರಿಗೂ, ಮತ್ತು ಮದುವೆಯಾದ ಮಹಿಳೆಯರಿಗೆ ಬಂಜಾರ ಸಮಾಜದಲ್ಲಿ ಪ್ರತ್ಯೇಕ ಉಡುಪುಗಳಿವೆ. ಪ್ರಾಚೀನ ಕಾಲದಿಂದಲೂ ಬಂದಿರುವ ಈ ಸಂಪ್ರದಾಯ ಇಂದಿನ ಯುವ ಪೀಳಿಗೆಯೂ ಪಾಲಿಸಿಕೊಂಡು ಬರುತ್ತಿದೆ. ಕೆಲವು ಕಡೆ ಕಡಿಮೆಯಾಗುತ್ತಿದ್ದರೂ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಮುಖಂಡ ಅಶೋಕ ಪವಾರ.
ಶೈಕ್ಷಣಿಕ ಪ್ರಗತಿ-ಸ್ವಾವಲಂಬಿ ಬದುಕಿನತ್ತ ಬಂಜಾರ ಸಮಾಜ
ಕಾಡಂಚಿನಲ್ಲಿರುವ ಬಂಜಾರ ಸಮಾಜದ ಜನರು ಕಾಲಕ್ರಮೇಣವಾಗಿ ಶಿಕ್ಷಣಕ್ಕಾಗಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ತಾಂಡಾಗಳಲ್ಲಿ ವಾಸಿಸುವ ಜನರು ಗ್ರಾಮಕ್ಕೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ತಾಲ್ಲೂಕಿನ ಅನೇಕರು ಆರೋಗ್ಯ, ಶಿಕ್ಷಣ, ಪೊಲೀಸ್, ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೆಲವರು ವ್ಯಾಪಾರದಲ್ಲಿ ತೊಡಗಿಸಿಕೊಂಡು ಸ್ವಾಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸೇಡಂ ತಾಲ್ಲೂಕು ಕೇಂದ್ರ, ಜಿಲ್ಲಾ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಹತ್ತಾರು ಕೆಲಸಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದಲ್ಲಿ ಒಳಮೀಸಲಾತಿಗಾಗಿ ವಿಶೇಷವಾಗಿರುವ ಹೋರಾಟವನ್ನು ಪಡೆಯಲು ಒಗ್ಗಟ್ಟಿನಿಂದ ಮುಂದಾಗಿರುವುದು ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.