ADVERTISEMENT

ಕಲಬುರಗಿ | ಸುಪಾರಿ ಕೊಲೆ ಪ್ರಕರಣ: ಆರು ಮಂದಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:42 IST
Last Updated 1 ನವೆಂಬರ್ 2025, 6:42 IST
ಮೃತ ದಯಾನಂದ
ಮೃತ ದಯಾನಂದ   

ಕಲಬುರಗಿ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ಆಳಂದ ತಾಲ್ಲೂಕಿನ ಶುಕ್ರವಾಡಿ ನಿವಾಸಿ ದಯಾನಂದ ಲಾಡಂತಿ ಅವರ ಸುಪಾರಿ ಕೊಲೆ ಪ್ರಕರಣದ ಆರು ಮಂದಿ ಅಪರಾಧಿಗಳಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.

ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್‌ ನಿವಾಸಿ ಸುರೇಶ ಜಾಧವ (42), ಕಲಬುರಗಿಯ ನೀಲಕಂಠ ಮಾಮನಿ (42), ಕೃಷ್ಣ ಜಮಾದಾರ (28), ಆಳಂದ ತಾಲ್ಲೂಕಿನ ಶುಕ್ರವಾಡಿಯ ಸುನೀಲ ಲಾಡಂತಿ (35), ಕಲಬುರಗಿಯ ಅಂಬಿಕಾ ಕೊಡೇಕಲ್‌ (41) ಹಾಗೂ ಆಳಂದ ತಾಲ್ಲೂಕಿನ ಬಟ್ಟರಗಿಯ ಸಂತೋಷ ತಳವಾರ (40) ಶಿಕ್ಷೆಗೆ ಒಳಗಾದ ಅಪರಾಧಿಗಳು.

ಹಿನ್ನೆಲೆ:

ADVERTISEMENT

ಕೊಲೆಯಾಗಿದ್ದ ದಯಾನಂದ ಲಾಡಂತಿ ಹಾಗೂ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಸುನೀಲ ಲಾಡಂತಿ ಕುಟುಂಬಗಳ ನಡುವೆ ಜನ್ಮದಿನದ ಪಾರ್ಟಿಯೊಂದರಲ್ಲಿ ಗಲಾಟೆ ನಡೆದಿತ್ತು. ಬಳಿಕ ದಯಾನಂದ ಕೊಲೆಗೆ ಸುನೀಲ ಲಾಡಂತಿ ₹ 3 ಲಕ್ಷಗೆ ಕೊಲೆ ಮಾಡಲು ಸುಪಾರಿ ನೀಡಿದ್ದ. 

ಅದರಂತೆ ಪ್ರಕರಣದ ಇನ್ನುಳಿದ ಅಪರಾಧಿಗಳು ಸಂಚು ರೂಪಿಸಿದ್ದರು. ಸಂಚಿನ ಭಾಗವಾಗಿ ಅಪರಾಧಿ ಅಂಬಿಕಾ ಕೊಲೆಯಾದ ದಯಾನಂದ ಅವರನ್ನು ‍ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿದ್ದರು. 2022ರ ಜೂನ್‌ 24ರಂದು ದಯಾನಂದನನ್ನು ಆಳಂದದಿಂದ ಕಲಬುರಗಿಗೆ ಕರೆಯಿಸಿದ್ದ ಅಂಬಿಕಾ, ಕೇಂದ್ರ ಬಸ್‌ ನಿಲ್ದಾಣದಿಂದ ಸ್ಕೂಟರ್‌ನಲ್ಲಿ ವಾಜಪೇಯಿ ಬಡಾವಣೆಯತ್ತ ಕರೆದೊಯ್ದಿದ್ದರು. ಆಗ ಹಿಂದಿನಿಂದ ಆಟೊದಲ್ಲಿ ಬಂದಿದ್ದ ಅಪರಾಧಿಗಳು ದಯಾನಂದ ಕೊಲೆಗೈಗಿದ್ದರು. ಈ ದೃಶ್ಯವನ್ನು ಅಂಬಿಕಾ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸುಪಾರಿ ನೀಡಿದ್ದ ಸುನೀಲಗೆ ಕಳುಹಿಸಿದ್ದರು.

ಈ ಸಂಬಂಧ ಕಲಬುರಗಿಯ ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸಿಪಿ ಗೀತಾ ಬೇನಾಳ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮೋಹನ ಬಾಡಗಂಡಿ, ಪ್ರಕರಣದಲ್ಲಿ ಆರು ಮಂದಿ ಮೇಲಿನ ಆರೋಪ ಸಾಬೀತಾಗಿದ್ದು, ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ.ಕಿರಣಗಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.