
ಕಾಳಗಿ: ಅತಿವೃಷ್ಟಿ ಪರಿಣಾಮ ತಾಲ್ಲೂಕಿನಲ್ಲಿ ತೊಗರಿ ಬೆಳೆ ಗೊಡ್ಡು (ನೆಟೆ) ರೋಗಕ್ಕೆ ತಿರುಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.
ಈ ಪ್ರದೇಶದ ರೈತರು ಮೊದಲೇ ತೊಗರಿ ಮೇಲೆ ಅವಲಂಬಿತರಾಗಿ ಪ್ರತಿವರ್ಷ ಮುಂಗಾರಿನಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ ಮಾಡುತ್ತಾರೆ.
ಸಿಕ್ಕಾಪಟ್ಟೆ ಖರ್ಚು ಮಾಡಿ ಕಷ್ಟಪಟ್ಟು ಎಷ್ಟೊ ಸಲ ಉತ್ತಮ ಇಳುವರಿ ತೆಗೆದಾಗ ಸರಿಯಾದ ಬೆಂಬಲ ಬೆಲೆ ದೊರೆಯದೆ ಕೃಷಿಕರು ಹೈರಾಣಾಗಿದ್ದಾರೆ. ಆ ವೇಳೆ ಹೆಸರು, ಉದ್ದು ಆದರೂ ಚೆನ್ನಾಗಿ ಬೆಳೆದು ಒಂದಿಷ್ಟು ಖರ್ಚಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು.
ಆದರೆ, ಈ ವರ್ಷ ಮಿತಿಮೀರಿ ಸುರಿದ ಮಳೆಗೆ ಮುಂಗಾರಿನ ಹೆಸರು, ಉದ್ದು ಮೊದಲೇ ಕೈ ಕೊಟ್ಟಿವೆ. ತೊಗರಿಯಾದರೂ ಕೈ ಹಿಡಿಯುತ್ತಾ ಎಂದುಕೊಂಡಿದ್ದ ರೈತರಿಗೆ ಹೂವು, ಚೆಳ್ಳಿ (ಮೊಗ್ಗು) ಮೂಡುವ ಮುಂಚೆಯೇ ತೊಗರಿ ಗೊಡ್ಡುರೋಗ ಬಾಧೆಗೆ ತುತ್ತಾಗಿದನ್ನು ನೋಡಿ ಮರಗುತ್ತಿದ್ದಾರೆ.
ರಟಕಲ್, ಕಾಳಗಿ, ಪಸ್ತಾಪುರ, ರಾಯಕೋಡ, ಮಂಗಲಗಿ, ಭರತನೂರ, ರಾಜಾಪುರ, ಹಲಚೇರಾ, ಮಲಘಾಣ ಮುಂತಾದ ಗ್ರಾಮಗಳಿಂದ ರೈತರು ಕೃಷಿ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತೊಗರಿ ಗೊಡ್ಡು ರೋಗಕ್ಕೆ ಹೋಗಿದ್ದರ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ.
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿವೆ. ಕೆಲಕಡೆ ರೈತರು ನೆಟೆ ರೋಗದ ತೊಗರಿ ಪೂರ್ತಿಯಾಗಿ ಕಿತ್ತುಹಾಕಿ ಸಂಕಷ್ಟ ತೋಡಿ ಕೊಳ್ಳುತ್ತಿದ್ದಾರೆ.
ಕೇವಲ ತೊಗರಿಯೊಂದೇ ಬಿತ್ತನೆ ಮಾಡಿದ್ದ ರೈತರು ಈಗ ನೆಟೆರೋಗ ಕಂಡು ಕುಸುಬೆ, ಕಡ್ಲಿಯೂ ಬಿತ್ತನೆ ಮಾಡದ ಸ್ಥಿತಿಯಲ್ಲಿ ದಿಕ್ಕುತೋಚದೆ ಕುಳಿತಿದ್ದಾರೆ. ಕೃಷಿ ಮನೆತನದ ವರ್ಷದ ಖರ್ಚಿನ ಚಿಂತೆ ಮಾಡುತ್ತಿದ್ದಾರೆ.
ತೊಗರಿ ಗೊಡ್ಡುರೋಗಕ್ಕೆ ಹೋಗಿದ್ದರ ಬಗ್ಗೆ ಅನೇಕ ಕಡೆ ರೈತರಿಂದ ಫೋನ್ ಕರೆ ಬರುತ್ತಿವೆ. ರೋಗದ ಲಕ್ಷಣಗಳು ನೋಡಿ ನಿರ್ವಹಣೆ ಮಾಡಲು ಸಲಹೆ ನೀಡಲಾಗುತ್ತಿದೆಸರೋಜಾ ಕಲಬುರಗಿ, ಕೃಷಿ ಅಧಿಕಾರಿ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.