ADVERTISEMENT

‘ಗೃಹ ಆರೋಗ್ಯ’ ಕೊಡಗಿನಲ್ಲಿ ಆರಂಭ: ಮನೆ ಮನೆಗೆ ವೈದ್ಯರ ಭೇಟಿ

1 ಲಕ್ಷಕ್ಕೂ ಅಧಿಕ ಮನೆಗಳಿಗೆ ಆರೋಗ್ಯ ಇಲಾಖೆ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:00 IST
Last Updated 19 ಜುಲೈ 2025, 5:00 IST
ಮಡಿಕೇರಿಯಲ್ಲಿ ಗೃಹ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು
ಮಡಿಕೇರಿಯಲ್ಲಿ ಗೃಹ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು   

ಮಡಿಕೇರಿ: ಸರ್ಕಾರದ ಮಹತ್ವಕಾಂಕ್ಷೆಯ ‘ಗೃಹ ಆರೋಗ್ಯ’ ಕಾರ್ಯಕ್ರಮಕ್ಕೆ ಶಾಸಕ ಡಾ.ಮಂತರ್‌ಗೌಡ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಈ ಮೂಲಕ 157 ಜನರ ತಂಡವು 1 ಲಕ್ಷಕ್ಕೂ ಅಧಿಕ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಅಭಿಯಾನವೂ ಆರಂಭಗೊಂಡಿತು.

ಇನ್ನು ಮುಂದೆ ಮನೆಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆಯ ತಂಡವು ಅಸಾಂಕ್ರಾಮಿಕ ರೋಗಗಳ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಿದೆ. ಇದರಿಂದ ರೋಗವು ಗಂಭೀರ ಅವಸ್ಥೆಗೆ ತಲುಪುವುದು ತಪ್ಪಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಗೃಹ ಆರೋಗ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ‘ಗೃಹ ಆರೋಗ್ಯವು ನಮ್ಮ ಮನೆಯಿಂದಲೇ ಆರಂಭವಾದಾಗ ಮಾತ್ರ ಇದಕ್ಕೆ ಅರ್ಥ ಬರಲಿದೆ.  ಪ್ರತಿಯೊಬ್ಬರೂ ಪ್ರತೀದಿನ ವ್ಯಾಯಾಮ ಮತ್ತು ನಡಿಗೆ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

ADVERTISEMENT

30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ರೆಟಿನೋಪತಿ, ಮಾನಸಿಕ ಆರೋಗ್ಯ, ಅಸ್ವಸ್ಥತೆ, ನರ ವೈಜ್ಞಾನಿಕ ಅಸ್ವಸ್ಥತೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ಶ್ವಾಸಕೋಶ ಕಾಯಿಲೆ, ಆಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ, ರಕ್ತ ಹೀನತೆ ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಉಚಿತವಾಗಿ ತಪಾಸಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತರಲ್ಲಿ ಹೆಚ್ಚಿನ ಜವಾಬ್ದಾರಿಯಿದ್ದು, ತಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯ ಕಾಪಾಡುವುದು ಅತೀ ಮುಖ್ಯವಾಗಿದೆ ಎಂದು ಕಿವಿಮಾತು ಹೇಳಿದರು.

ಆಲೂರು ಸಿದ್ದಾಪುರ ಹಾಗೂ ಶನಿವಾರಸಂತೆ ವೈದ್ಯಾಧಿಕಾರಿಗಳಾದ ಡಾ.ಸುಪರ್ಣ ಮತ್ತು ಡಾ.ಅಶೋಕ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿದರು. ಇದೇ ವೇಳೆ ಮಂತರ್‌ಗೌಡ ಸರ್ಕಾರ ಹೊರ ತಂದಿರುವ ಗೃಹ ಆರೋಗ್ಯ ಪುಸ್ತಕನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಡಾ.ಸನತ್, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಶಾಂಭವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ತಾಲ್ಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶ್ರುಶ್ರೂಷಕರು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಗೃಹ ಆರೋಗ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಸಿಬ್ಬಂದಿ
ಗೃಹ ಆರೋಗ್ಯ ಕಾರ್ಯಕ್ರಮದ ಪುಸ್ತಕವನ್ನು ಶಾಸಕ ಡಾ.ಮಂತರ್‌ಗೌಡ ಮಡಿಕೇರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು

ವೈದ್ಯಕೀಯ ತರಬೇತಿ ಕೇಂದ್ರ ಆರಂಭಕ್ಕೆ ಚಿಂತನೆ; ಶಾಸಕ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವೈದ್ಯಕೀಯ ತರಬೇತಿ ಕೇಂದ್ರ’ ಆರಂಭಿಸಲು ಚಿಂತಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು. ಸರ್ಕಾರ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ₹ 41 ಕೋಟಿ ಬಿಡುಗಡೆ ಮಾಡಿದೆ. ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯನ್ನು 400 ಹಾಸಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಟಿ ಸ್ಕ್ಯಾನ್ ಜೊತೆಗೆ ಎಂಆರ್‌ಐ ಸ್ಕ್ಯಾನ್ ಸಹ ಆರಂಭವಾಗಿದೆ. ಎಚ್‍ಐವಿ ಎಚ್‍ಬಿಪಿ ಮತ್ತಿತರ ಆರೋಗ್ಯ ಸೇವೆಗಳು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೇ ದೊರೆಯಲಿದೆ ಎಂದರು. ಜನರು ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುತ್ತಿದ್ದರು. ಈಗ ಸರ್ಕಾರ ಆದಷ್ಟು ಹೆಚ್ಚಿನ ಆರೋಗ್ಯ ಸೇವೆ ಕಲ್ಪಿಸಿದ್ದು ಮಡಿಕೇರಿಯಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.

30 ವರ್ಷ ದಾಟಿದವರು 2.52 ಲಕ್ಷ

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ‘ಜಿಲ್ಲೆಯಲ್ಲಿ 30 ವರ್ಷ ತುಂಬಿದ 2.52 ಲಕ್ಷ ಜನರಿದ್ದು ಅವರಲ್ಲಿ 53 ಸಾವಿರ ಜನರಿಗೆ ಅಧಿಕ ರಕ್ತದೊತ್ತಡ ಇದೆ. 33 ಸಾವಿರ ಜನರು ಮಧುಮೇಹವಿದೆ. ಗೃಹ ಆರೋಗ್ಯದಡಿ ಕೊಡಗು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡಲು 157 ತಂಡವನ್ನು ರಚಿಸಲಾಗಿದೆ. ಅದರಲ್ಲಿ ಈ ತಂಡವು 1 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಭೇಟಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಅಸಾಂಕ್ರಾಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಹಚ್ಚುವುದಕ್ಕೆ ಹಾಗೂ ಅದನ್ನು ನಿರ್ವಹಣೆ ಮಾಡುವುದಕ್ಕಾಗಿ ಗೃಹ ಆರೋಗ್ಯ ಕಾರ್ಯಕ್ರಮ ಆರಂಭಿಸಲಾಗಿದೆ
- ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.