ADVERTISEMENT

ಬೆಳೆಗೆ ‘ಕಟ್ಟು ಪದ್ಧತಿ’ ನೀರು: ಹಾರಂಗಿ ಜಲಾಶಯದ ವ್ಯಾಪ್ತಿಯ ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:51 IST
Last Updated 19 ಜುಲೈ 2025, 4:51 IST
<div class="paragraphs"><p>ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯ</p></div>

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯ

   

ಮಡಿಕೇರಿ: ಹಾರಂಗಿ ಜಲಾಶಯದ ವ್ಯಾಪ್ತಿಗೆ ಬರುವ ರೈತರು ನಾಲೆಯ ನೀರನ್ನು ಅವಲಂಬಿಸಿ ದೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಬೇಕು ಎಂದು ಕುಶಾಲನಗರ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಸತೀಶ ತಿಳಿಸಿದ್ದಾರೆ.

ಒಂದು ವೇಳೆ ಸೂಚನೆ ಉಲ್ಲಂಘಿಸಿ ದೀರ್ಘಾವಧಿ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ಕಾವೇರಿ ನೀರಾವರಿ ನಿಗಮವು ಯಾವುದೇ ರೀತಿಯಲ್ಲಿಯೂ ಜವಾಬ್ದಾರಿಯಲ್ಲ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ನೀರು ಬಿಡುವ ವೇಳಾಪಟ್ಟಿಯು ಪರಿಷ್ಕರಣೆಗೆ ಒಳಗಾಗುತ್ತದೆ. ಆಗ ಉಂಟಾಗಬಹುದಾದ ಬೆಳೆಹಾನಿಗೆ ಕಾವೇರಿ ನೀರಾವರಿ ನಿಗಮವು ಜವಾಬ್ದಾರರಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಜುಲೈ 17ರಿಂದಲೇ ನಾಲೆಗಳಿಗೆ ನೀರು ಬಿಡಲಾಗುತ್ತಿದ್ದು, ಆಗಸ್ಟ್ 1ರವರೆಗೆ ಅಚ್ಚುಕಟ್ಟು ವ್ಯಾಪ್ತಿಯ ಜನಜನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳಿಗೆ ನೀರನ್ನು ಹರಿಸಲಾಗುತ್ತದೆ. ತದನಂತರ, ಆಗಸ್ಟ್ 2ರಿಂದ 14ರವರೆಗೆ ನಿರ್ದಿಷ್ಟ ವೇಳಾಪಟ್ಟಿಯಂತೆ ಕಟ್ಟುನೀರಿನ ಪದ್ಧತಿಯ ಆಧಾರದಲ್ಲಿ ಖಾರೀಫ್ 2025ರ ಬೆಳೆಗಳಿಗಾಗಿ ನಾಲೆಗಳಿಗೆ ನೀರನ್ನು ಹರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಶಾಸಕ ಡಾ.ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ ಕೈಗೊಂಡಿದ್ದು, ಆ ಪ್ರಕಾರವೇ ನೀರು ಹರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಾರಂಗಿ ಜಲಾಶಯದಿಂದ 1.34 ಲಕ್ಷ ಎಕರೆಗೆ ಹಾಗೂ 2,600 ಎಕರೆ ಸಣ್ಣ ನೀರಾವರಿ ಕೆರೆಗಳಿಗೆ ನೀರು ಕೊಡಲಾಗುತ್ತದೆ. ಅದರಲ್ಲಿ ಹಾರಂಗಿ ಬಲದಂಡೆ ನಾಲೆಯಿಂದ 7,632 ಎಕರೆ ಭತ್ತ, 59,700 ಎಕರೆ ಅರೆ ನೀರಾವರಿ ಬೆಳೆಗಳಿಗೆ ನೀರು ಕೊಡಲಾಗುತ್ತದೆ. ಹಾರಂಗಿ ಎಡದಂಡೆ ನಾಲೆಯಿಂದ 7,935 ಎಕರೆ ಭತ್ತ, 25,528 ಎಕರೆ ಅರೆ ನೀರಾವರಿ ಬೆಳೆಗಳಿಗೆ, ಸೋಮವಾರಪೇಟೆ ಏತ ನೀರಾವರಿ ಯೋಜನೆಯಿಂದ 1,500 ಎಕರೆ ಭತ್ತಕ್ಕೆ, ಪಿರಿಯಾಪಟ್ಟಣ ಏತ ನೀರಾವರಿ ಯೋಜನೆಯಿಂದ 30 ಸಾವಿರ ಎಕರೆ ಅರೆ ನೀರಾವರಿ ಬೆಳೆಗಳಿಗೆ ನೀರು ಕೊಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.