
ಕುಶಾಲನಗರ: ಪಟ್ಟಣದ ಐತಿಹಾಸಿಕ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಅಂಗವಾಗಿ ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಇಲ್ಲಿನ ಬೈಚನಹಳ್ಳಿ ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಆಯೋಜಿಸಿರುವ ದನಗಳ ಜಾತ್ರೆ ಗ್ರಾಮೀಣ ಸಂಸ್ಕೃತಿ ಬಿಂಬಿಸಿತು.
ನ.8ರಿಂದ ಜಾತ್ರೆ ನಡೆಯುತ್ತಿದ್ದು, ಗುರುವಾರ ದನಗಳ ಜಾತ್ರೆಗೆ ಚಾಲನೆ ನೀಡಲಾಯಿತು.
ವಿವಿಧ ತಳಿಯ ರಾಸುಗಳು ಗಮನ ಸೆಳೆದವು. ಇವುಗಳ ಜತೆ ಕುರಿ, ಶ್ವಾನ ಪ್ರದರ್ಶನವೂ ಜನರನ್ನು ಆಕರ್ಪಿಸಿದವು. ಅಲಂಕರಿಸಿದ ಹಳ್ಳಿಕಾರ್, ಮಿಶ್ರತಳಿಯ ಎತ್ತು, ಹಸು ಕರುಗಳು ರೈತರು ಭಾಗವಹಿಸಿದ್ದರು.
ಪಟ್ಟಣ ಸೇರಿದಂತೆ ಗುಡ್ಡೆಹೊಸೂರು, ಕೂಡಿಗೆ, ಕಣಿವೆ ಹೆಬ್ಬಾಲೆ, ಶಿರಂಗಾಲ, ಅರಕಲಗೂಡು ತಾಲ್ಲೂಕಿನ ಕೊಣನೂರು, ರಾಮನಾಥಪುರ, ಕಡುವಿನಹೊಸಹಳ್ಳಿ, ಪಿರಿಯಾಪಟ್ಟಣ ತಾಲ್ಲೂಕಿನ ಆವರ್ತಿ, ಬೆಟ್ಟದಪುರ, ಹಾರ್ನಹಳ್ಳಿ, ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ, ಸಾಲಿಗ್ರಾಮ ಚುಂಚನಕಟ್ಟೆ ಭಾಗದ ರೈತರು ಜಾನುವಾರುಗಳೊಂದಿಗೆ ಭಾಗವಹಿಸಿ ಖುಷಿ ಹೆಚ್ಚಿಸಿದರು.
ಎತ್ತಿನಗಾಡಿ ಆಟಕ್ಕಾಗಿ ವಿಶೇಷವಾಗಿ ಅಣಿಗೊಳಿಸಿರುವ ಎತ್ತುಗಳು, ವಿದೇಶಿ ತಳಿಯ ಹಸು ಹಾಗೂ ವಿವಿಧ ಜಾತಿ ಆಕರ್ಷಕ ಶ್ವಾನಗಳು ಎಲ್ಲರ ಗಮನ ಸೆಳೆದವು. ಗ್ರಾಮೀಣ ಜನಪದ ಸಂಸ್ಕೃತಿಯ ಭಾಗವಾದ ದನಗಳ ಜಾತ್ರೆ ಗಣಪತಿ ಜಾತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಹಳ್ಳಿಗಾಡಿನ ಸೊಗಡಿನೊಂದಿಗೆ ತಮ್ಮ ಜಾನುವಾರುಗಳನ್ನು ಜಾತ್ರೆಗೆ ಕರೆತಂದು ವಿಶೇಷ ಆರೈಕೆಯೊಂದಿಗೆ ಬಂದ ರೈತರು ಯುವ ಪೀಳಿಗೆಯನ್ನು ಆಕರ್ಷಿಸಿದರು.
ಪ್ರತಿ ವರ್ಷ ಗಣಪತಿ ಜಾತ್ರೋತ್ಸವದಲ್ಲಿ ಒಂದು ದಿನಕ್ಕೆ ಸೀಮಿತವಾಗಿದ್ದ ದನಗಳ ಜಾತ್ರೆ ಇತ್ತೀಚಿನ ವರ್ಷಗಳಿಂದ ಮೂರು ದಿನಗಳವರೆಗೆ ನಡೆಯುತ್ತಿದೆ. ಜಾತ್ರೆಗೆ ಹತ್ತಾರು ಹಳ್ಳಿಗಳಿಂದ ನೂರಾರು ಜಾನುವಾರುಗಳು ಆಗಮಿಸಿದ್ದು, ಪ್ರದರ್ಶನಗೊಳುತ್ತಿವೆ. ಪ್ರದರ್ಶನದಲ್ಲಿ ₹ 50 ಸಾವಿರದಿಂದ ₹ 5 ಲಕ್ಷದವರೆಗಿನ ಜಾನುವಾರು ಜೋಡಿಗಳು ಬಂದಿವೆ. ಹೈನುಗಾರಿಕೆ ಉತ್ತೇಜನದೊಂದಿಗೆ ರೈತರಿಗೆ ಗೋಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಸ್ಥಾನ ಸಮಿತಿ ಗೋಪ್ರದರ್ಶನ ನಡೆಸುತ್ತಿದೆ.
ದನಗಳ ಜಾತ್ರೆಗೆ ಬರುವ ಜಾನುವಾರುಗಳಿಗೆ ಹಾಗೂ ರೈತರಿಗೆ ಅಗತ್ಯ ವ್ಯವಸ್ಥೆಗಳನ್ನು ಉಚಿತವಾಗಿ ಸಮಿತಿ ವತಿಯಿಂದ ಕಲ್ಪಿಸಲಾಗುತ್ತಿದೆ. ದನಗಳಿಗೆ ಕುಡಿಯಲು ನೀರು, ಹುಲ್ಲು ಹಾಗೂ ರೈತರಿಗೆ ವಸತಿ ಹಾಗೂ ರಿಯಾಯಿತಿ ದರದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ರೈತರಿಗೂ ತಮ್ಮ ಜಾನುವಾರುಗಳ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಶಾಮಿಯಾನ ಹಾಕಲಾಗಿದೆ.
‘ರಾಮನಾಥಪುರ, ಚುಂಚನಕಟ್ಟೆ, ಸಾಲಿಗ್ರಾಮ, ಗುಡುಗಳಲೆ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ನಡೆಯುವ ದನಗಳ ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಕುಶಾಲನಗರ ಜಾತ್ರೆಗೂ ಕಳೆದ ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದೇನೆ’ ಎಂದು ರೈತ ರಾಜು ಸಾಲಿಗ್ರಾಮ ಸಂತಸದಿಂದ ಹೇಳಿದರು.
‘ಇಲ್ಲಿ ದನಗಳಿಗೆ ಹಾಗೂ ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಿರುವುದು ಉತ್ತಮ ನಡೆ, ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ’ ಎಂದು ಆವರ್ತಿಯ ಸುರೇಶ್ ಹೇಳಿದರು.
ಈ ವಿಶೇಷ ದನಗಳ ಜಾತ್ರೆಯನ್ನು ವೀಕ್ಷಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಸಂಜೆ ವೇಳೆಯಲ್ಲಿ ಜನದಟ್ಟಣೆ ಹೆಚ್ಚು.
ಗೋಪ್ರದರ್ಶನಕ್ಕೆ ಬರುವ ಹಸುಗಳನ್ನು ಪಶುವೈದ್ಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್.ಶಿಂಧೆ, ಕೂಡಿಗೆಯ ಡಾ.ನಾಗರಾಜು, ಶನಿವಾರಸಂತೆಯ ಡಾ. ಸತೀಶ್ ಅವರ ನೇತೃತ್ವದ ತಂಡವು ಜಾನುವಾರುಗಳ ಮೈಕಟ್ಟು, ಬಣ್ಣ, ರೂಪ, ವರ್ತನೆ ಮೊದಲಾದ ಗುಣಾತ್ಮಕ ಅಂಶಗಳನ್ನು ಪರಿಶೀಲಿಸಿತು. ಎಲ್ಲಾ ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ವಿಜೇತ ಗೋವುಗಳ ಮಾಲೀಕರಿಗೆ ನ.14ರಂದು ನಡೆಯುವ ಜಾತ್ರೋತ್ಸವದ ಸಮಾರೋಪದಲ್ಲಿ ಬಹುಮಾನ ವಿತರಿಸಲಾಗುತ್ತದೆ.
ಗೋಪ್ರದರ್ಶನ ಉದ್ಘಾಟನೆ: ಗೋಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಗುರುವಾರ ಚಾಲನೆ ನೀಡಿದರು.
‘ಗ್ರಾಮೀಣ ಸೊಗಡಿನ ಗೋಜಾತ್ರೆಯನ್ನು ನಗರಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.