ADVERTISEMENT

ಕಾಫಿನಾಡಿನಲ್ಲಿ ಮೊಳಗಿತು ಕನ್ನಡದ ಕಹಳೆ

ಬಿರು ಬಿಸಿಲಿನಲ್ಲಿ ಒಡಮೂಡಿತು ಮನ ಸೆಳೆಯುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:07 IST
Last Updated 2 ನವೆಂಬರ್ 2025, 4:07 IST
ಮಡಿಕೇರಿಯಲ್ಲಿ ಶನಿವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು
ಮಡಿಕೇರಿಯಲ್ಲಿ ಶನಿವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು   

ಮಡಿಕೇರಿ: ಬಿರು ಬಿಸಿಲನ್ನು ಲೆಕ್ಕಿಸದೇ ಮಕ್ಕಳು ಮೈದಾನದಲ್ಲಿ ದೂಳೆಬ್ಬಿಸುತ್ತಾ ಕನ್ನಡದ ಕಹಳೆ ಮೊಳಗಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, ಸಾವಿರಾರು ಮಂದಿ ಸೇರಿ ಕನ್ನಡದ ಘೋಷಗಳನ್ನು ಮೊಳಗಿಸಿದರು.

20 ತಂಡಗಳ ಆಕರ್ಷಕ ಪಥಸಂಚಲನ, 8 ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಬಿಸಿಲನ್ನೂ ಲೆಕ್ಕಿಸದೇ ನೂರಾರು ಮಂದಿ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

ADVERTISEMENT

ಕವಾಯತು ದಂಡನಾಯಕ ಎಚ್.ಬಿ.ಗಣೇಶ್ ಅವರ ನೇತೃತ್ವದಲ್ಲಿ ಆರಂಭವಾದ ಪಥಸಂಚಲನದಲ್ಲಿ ವಿವಿಧ ವಿಭಾಗಗಳ ಪೊಲೀಸರು ಮಾತ್ರವಲ್ಲದೇ ಗೃಹರಕ್ಷಕ ದಳ, ಅರಣ್ಯ ಇಲಾಖೆಯ ತಂಡಗಳು ಭಾಗಿಯಾಗಿದ್ದವು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಪಿಎಂಶ್ರೀ ಜವಾಹರ್ ನವೋದಯ ಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ಕೊಡಗು ವಿದ್ಯಾಲಯ, ಸಂತ ಮೈಕಲರ ಪ್ರೌಢಶಾಲೆಯ ಎನ್‌ಸಿಸಿ ತಂಡಗಳು ಶಿಸ್ತುಬದ್ಧ ಪಥಸಂಚಲನದಲ್ಲಿ ಭಾಗಿಯಾದವು.

ಇವರ ನಂತರ ರಾಜೇಶ್ವರಿ ಶಾಲೆ, ಬ್ಲಾಸಂ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸ್ಕೌಟ್ಸ್ ತಂಡಗಳು, ಸಂತ ಜೋಸೆಫರ ಪ್ರಾಥಮಿಕ ಶಾಲೆ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಗೈಡ್ಸ್ ತಂಡಗಳು, ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಂತ ಮೈಕಲರ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಸೇವಾದಳ ತಂಡಗಳು ಪಥಸಂಚಲನದಲ್ಲಿ ಸಾಗಿದವು. ಇವುದಕ್ಕೆಲ್ಲ ಪೊಲೀಸ್ ವಾದ್ಯಗೋಷ್ಠಿ ತಂಡವು ಇಡೀ ಪಥಸಂಚಲನಕ್ಕೆ ಮೆರುಗು ನೀಡಿದ್ದು ಮಾತ್ರವಲ್ಲ ಸೇರಿದ್ದ ಜನಸ್ತೋಮದಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಪಥಸಂಚಲನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಭಾಷಣದ ನಂತರ ಇಡೀ ಮೈದಾನದಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ವೈವಿಧ್ಯಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಜನಮನಗೆದ್ದರು.

ಬಾಲಕರ ಬಾಲಮಂದಿರ, ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆ, ಸಂತ ಮೈಕಲರ ಪ್ರೌಢಶಾಲೆ, ಎಎಲ್‌ಜಿ ಕ್ರೆಸೆಂಟ್ ಶಾಲೆ, ಬಾಲಕಿಯರ ಬಾಲಮಂದಿರ, ಬ್ಲಾಸಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಹ‌ರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಕೊಡಗು ವಿದ್ಯಾಲಯದ ಮಕ್ಕಳು ಕನ್ನಡಪರ ಹಾಡುಗಳಿಗೆ ಹೆಜ್ಜೆ ಹಾಕಿದರು, ಕನ್ನಡ ನಾಡಿನ ಹೋರಾಟದ ರೂಪಕಗಳನ್ನು ಪ್ರಸ್ತುತಪಡಿಸಿದರು. 

ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದ ಪಾಲಿಬೆಟ್ಟದ ಸರ್ಕಾರಿ ಪ್ರೌಢಶಾಲೆಯ ಪಿ.ಜನಿಫರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಕಣ್ಣೂರು, ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿಶಾಲೆಯ ಎಂ.ಎಲ್.ಲಾಸ್ಯಾ ಅವರನ್ನು ಸನ್ಮಾನಿಸಲಾಯಿತು.

ಪಥಸಂಚಲನದಲ್ಲಿ ಭಾಗವಹಿಸಿದ್ದ ಎನ್‌ಸಿಸಿ ತಂಡಗಳ ಪೈಕಿ‍ ‍ಪಿಎಂಶ್ರೀ ಜವಾಹರ್ ನವೋದಯ ಶಾಲೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದವು. ಇತರೆ ತಂಡಗಳ ಪೈಕಿ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸೇವದಳ ಪ್ರಥಮ, ರಾಜೇಶ್ವರಿ ಶಾಲೆಯ ಸ್ಕೌಟ್ಸ್ ತಂಡ ದ್ವಿತೀಯ ಹಾಗೂ ಸಂತ ಮೈಕಲರ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಸೇವಾದಳ ತಂಡ ತೃತೀಯ ಸ್ಥಾನ ಗಳಿಸಿದವು.

ಇದಕ್ಕೂ ಮುನ್ನ ಕೋಟೆ ಆವರಣದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. 

ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಾಧಿಕಾರಿ ಧರ್ಮಜಾ ಉತ್ತಪ್ಪ ಭಾಗವಹಿಸಿದ್ದರು.

ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು
ಮಡಿಕೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು
ಮಡಿಕೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗಿಯಾದರು
ಮಡಿಕೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಯೊಬ್ಬರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು

ಬದುಕಿನಲ್ಲಿ ಕನ್ನಡತನ ಅಳವಡಿಸಿಕೊಳ್ಳಲು ಸಚಿವ ಕರೆ

‘ಎಲ್ಲರೂ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್.ಭೋಸರಾಜು ಕರೆ ನೀಡಿದರು. ಯುವ ಜನರು ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಅವರು ಕವಿ ಗೋಪಾಲಕೃಷ್ಣ ಅಡಿಗರ ’ಕಟ್ಟುವೆವು ನಾವು ಹೊಸ ನಾಡೊಂದನು‘ ಎಂಬ ಪದ್ಯದ ಸಾಲುಗಳನ್ನು ಪ್ರಸ್ತಾಪಿಸಿದರು.  ಇನ್ನುಳಿದ ತಮ್ಮ ಭಾಷಣದ ಬಹುಭಾಗವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳು ಕೊಡಗು ಜಿಲ್ಲೆಗೆ ಈಗಾಗಲೇ ನೀಡಿರುವ ವಿವಿಧ ಯೋಜನೆಗಳಿಗೆ ಮೀಸಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.