ADVERTISEMENT

ರಾಜ್ಯಗಳ ಪುನರ್‌ ಸಂಘಟನಾ ಆಯೋಗ ರಚಿಸಲು ಒತ್ತಾಯ

ನವದೆಹಲಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:17 IST
Last Updated 2 ನವೆಂಬರ್ 2025, 4:17 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಾಯಕರು ನವದೆಹಲಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಾಯಕರು ನವದೆಹಲಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆಗಾಗಿ ರಾಜ್ಯಗಳ 2ನೇ ಪುನರ್‌ ಸಂಘಟನಾ ಆಯೋಗ ರಚಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ (ಸಿಎನ್‌ಸಿ) ಶನಿವಾರ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಿತು.

’1956ರ ನವೆಂಬರ್ 1ರಂದು ವಿಶಾಲ ಮೈಸೂರಿನಲ್ಲಿ ಕೊಡವ ರಾಜ್ಯ ವಿಲೀನಗೊಂಡಿತು. ನಂತರ ಕೊಡವರ ಆಕಾಂಕ್ಷೆಗಳಿಗೆ, ನೋವುಗಳಿಗೆ ಮತ್ತು  ಭಾವನೆಗಳಿಗೆ ಸ್ಪಂದನೆ ಸಿಗಲಿಲ್ಲ‘ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಕೊಡವರು ಕೊಡವ ಪ್ರದೇಶದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಜನಾಂಗದವರಾಗಿರುವುದರಿಂದ ಆಂತರಿಕ ರಾಜಕೀಯ ಸ್ವ–ನಿರ್ಣಯದ ಹಕ್ಕುಗಳು, ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಸ್ವ ಆಡಳಿತ ಮತ್ತು ಇತರ 10 ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

’ಸಿಕ್ಕಿಂನ ಬೌದ್ಧ ಸಂನ್ಯಾಸಿ ಸಮುದಾಯಕ್ಕಾಗಿ ನೀಡಿರುವ ’ಸಂಘ‘ ಕ್ಷೇತ್ರದ ಮಾದರಿಯಲ್ಲಿ ಕೊಡವರಿಗಾಗಿ ವಿಶೇಷ ಕೊಡವ ಸಂಸದೀಯ ಕ್ಷೇತ್ರ ಮತ್ತು ಕೊಡವ ವಿಧಾನಸಭಾ ಕ್ಷೇತ್ರ ರಚಿಸಬೇಕು‘ ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳಿರುವ ಮನವಿ ಪತ್ರವನ್ನು ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.

ನಂದೇಟಿರ ಕವಿತಾ ಸುಬ್ಬಯ್ಯ, ಬೊಜ್ಜಂಗಡ ನಕ್ಷಾ ಪೂವಣ್ಣ, ಅಂಜಪರವಂಡ ಕೌಶಿ ನಿಖಿಲ್, ಜಮ್ಮಡ ಮೋಹನ್, ನಂದೇಟಿರ ರವಿ ಸುಬ್ಬಯ್ಯ, ಕುಲ್ಲೇಟಿರ ಅರುಣಾ ಬೇಬ, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಅಪ್ಪೆಯಂಗಡ ಮಾಲೆ ಪೂಣಚ್ಚ, ಕರ್ತಂಡ ದಿಲನ್, ಬೊಜ್ಜಂಗಡ ಪೂವಣ್ಣ, ಅಂಜಪರವಂಡ ನಿಖಿಲ್ ಕಾರ್ಯಪ್ಪ, ಮಾಚಿಮಂಡ ಶರತ್ ಸುಬ್ಬಯ್ಯ, ಮಾಚಿಮಾಡ ನಿಶಾನ್ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.