ADVERTISEMENT

ಮಡಿಕೇರಿ: ಮತ್ತೊಮ್ಮೆ ಚಿಗುರೊಡೆಯಿತು ಕಾಂಗ್ರೆಸ್ ಭವನದ ಕನಸು

ಹಿಂದೆ 2 ಬಾರಿ ನೆರವೇರಿತ್ತು ಶಿಲಾನ್ಯಾಸ, ಈಗ ನಡೆಯಿತು ಮತ್ತೊಮ್ಮೆ ಭೂಮಿಪೂಜೆ!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:19 IST
Last Updated 2 ನವೆಂಬರ್ 2025, 4:19 IST
<div class="paragraphs"><p>ಮಡಿಕೇರಿಯ ಡಿಸಿಸಿ ಬ್ಯಾಂಕ್ ಸಮೀಪ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಶನಿವಾರ ಶಿಲಾನ್ಯಾಸ ನೆರವೇರಿಸಿದರು</p></div>

ಮಡಿಕೇರಿಯ ಡಿಸಿಸಿ ಬ್ಯಾಂಕ್ ಸಮೀಪ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಶನಿವಾರ ಶಿಲಾನ್ಯಾಸ ನೆರವೇರಿಸಿದರು

   

ಮಡಿಕೇರಿ: ನಗರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಶನಿವಾರ ಮತ್ತೊಮ್ಮೆ ಶಿಲಾನ್ಯಾಸ ನೆರವೇರಿತು. ಈ ಹಿಂದೆ 2 ಬಾರಿ ವಿಜೃಂಭಣೆಯಿಂದ ಭೂಮಿಪೂಜೆ ನೆರವೇರಿದ್ದರೂ, ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಮೂರನೇ ಬಾರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಭವನ ನಿರ್ಮಾಣದ ಕನಸು ಸಾಗಿಬಂದ ಹಾದಿಯನ್ನು ಸಭಿಕರ ಮುಂದೆ ಪ್ರಸ್ತಾಪಿಸಿದರು.

ADVERTISEMENT

’1976ರ ವೇಳೆಗೆ ಕಾಂಗ್ರೆಸ್ ಪಕ್ಷ ನಿವೇಶನ ಪಡೆದ ನಂತರ ಭವನ ನಿರ್ಮಾಣ ಕಾಮಗಾರಿ ನಡೆಸಲು ಆಗಿರಲಿಲ್ಲ. 1996ರಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಭವನ ನಿರ್ಮಿಸಲು ಹೊರಟಾಗ ಕಾಂಗ್ರೆಸ್ ಮತ್ತು ಜನತಾದಳದ ಮಧ್ಯೆ ವಿವಾದ ಏರ್ಪಟ್ಟಿತ್ತು. ಆಗ ಎಂ.ಸಿ.ನಾಣಯ್ಯ ಜನತಾದಳದ ಸಚಿವರಾಗಿದ್ದರು ಮತ್ತು ಟಿ.ಪಿ.ರಮೇಶ್ ಅವರು ಜನತಾದಳದ ಅಧ್ಯಕ್ಷರಾಗಿದ್ದರು. ಆಗ ಎಂ.ಎಂ.ನಾಣಯ್ಯ ಅವರು ಕಾಂಗ್ರೆಸ್‌ ಪರವಾಗಿ ಈ ನಿವೇಶನಕ್ಕಾಗಿ ಹೋರಾಟ ನಡೆಸಿದ್ದರು‘ ಎಂದು ನೆನಪಿಸಿಕೊಂಡರು.

’ಆನಂತರ ನ್ಯಾಯಾಲಯದಲ್ಲಿ ವ್ಯಾಜ್ಯ ಏರ್ಪಟ್ಟು ಕೊನೆಗೆ ನ್ಯಾಯಾಲಯವು ಈ ನಿವೇಶನವು ಕಾಂಗ್ರೆಸ್‌ಗೆ ಸೇರಿದ್ದು ಎಂದು ತೀರ್ಪು ನೀಡಿತು. ಈ ವೇಳೆ ನಾವು ಎಂ.ಎಂ.ನಾಣಯ್ಯ , ಮಿಟ್ಟು ಚೆಂಗಪ್ಪ, ಟಿ.ಜಾನ್ ಅವರ ಕೆಲಸವನ್ನು ಸ್ಮರಸಲೇಬೇಕು‘ ಎಂದು ಅವರು ಹೇಳಿದರು.

ಹಿಂದೆ ಜನತಾದಳದಲ್ಲಿದ್ದ ಎಂ.ಸಿ.ನಾಣಯ್ಯ ಹಾಗೂ ಟಿ.ಪಿ.ರಮೇಶ್ ಈಗ ಕಾಂಗ್ರೆಸ್‌ನಲ್ಲಿದ್ದು, ವೇದಿಕೆಯಲ್ಲಿದ್ದರು.

ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ, ಮುಖಂಡರಾದ ಎಂ.ಲಕ್ಷ್ಮಣ, ಕೆ.ಪಿ.ಚಂದ್ರಕಲಾ, ವೀಣಾ ಅಚ್ಚಯ್ಯ, ಕೆ.ಕೆ.ಮಂಜುನಾಥ್‌ಕುಮಾರ್, ಕೆ.ಬಿ.ಶಾಂತಪ್ಪ, ಎಚ್.ಎಂ.ನಂದಕುಮಾರ್, ಕೊಲ್ಯದ ಗಿರೀಶ್, ಅಬ್ದುಲ್ ರೆಹಮಾನ್, ಕೆ.ಎಂ.ಲೋಕೇಶ್, ಬಿ.ವೈ.ರಾಜೇಶ ಹಾಗೂ ಎಲ್ಲ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರು ಭಾಗಿಯಾಗಿದ್ದರು.

ಭವನದ ಸ್ವರೂಪ

ಡಿಸಿಸಿ ಬ್ಯಾಂಕ್ ಸಮೀಪದಲ್ಲಿರುವ 10 ಸೆಂಟ್ ಜಾಗದಲ್ಲಿ ₹ 3 ಕೋಟಿ ವೆಚ್ಚದಲ್ಲಿ 3 ಅಂತಸ್ತಿನ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಭವನದಲ್ಲಿ ಸಭಾಂಗಣ, ಅಧ್ಯಕ್ಷರ ಕೊಠಡಿ ಮಾತ್ರವಲ್ಲದೇ ಕೆಳಗೆ ಮಳಿಗೆಗಳನ್ನೂ ನಿರ್ಮಿಸುವ ಉದ್ದೇಶ ಇದೆ. ಇದಕ್ಕಾಗಿ ಪ್ರತಿ ಕಾರ್ಯಕರ್ತರಿಂದ ದೇಣಿಗೆ ಪಡೆಯಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಕೆಲವು ಕಾರ್ಯಕರ್ತರು ದೇಣಿಗೆಯನ್ನು ಘೋಷಿಸಿದರು. ಜೊತೆಗೆ, ಕೊಡಗು ಜಿಲ್ಲೆಯಿಂದ ಆಯ್ಕೆಯಾಗಿರುವ ಹಾಗೂ ಕೊಡಗು ಜಿಲ್ಲೆಯ ಮೂಲದ ನಾಯಕರಿಂದಲೂ ಹೆಚ್ಚಿನ ದೇಣಿಗೆ ಪಡೆಯಲು ಚಿಂತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಡಿಕೇರಿಯ ಡಿಸಿಸಿ ಬ್ಯಾಂಕ್ ಸಮೀಪ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.